ರಘು ದೀಕ್ಷಿತ್ ಸಂಜಿತ್ ಹೆಗಡೆ ಝಲಕ್…
ಸಂಭ್ರಮಿಸಿದ ಟೀನೇಜ್…
ಮೈಸೂರು ಅ19,Tv10 ಕನ್ನಡ
- TV10 Kannada Exclusive
- October 20, 2023
- No Comment
- 188


ಯುವ ದಸರಾದ ಎರಡನೇ ದಿನವಾದ ಇಂದು ಸ್ಯಾಂಡಲ್ ವುಡ್‌ನ ಗಾಯಕ ರಘು ದೀಕ್ಷಿತ್ ಮತ್ತು ಯುವ ಗಾಯಕ ಸಂಜಿತ್ ಹೆಗಡೆ ಅವರು ತಮ್ಮ ಸಂಗೀತ ಸುಧೆ ಮೂಲಕ ನೆರೆದಿದ್ದ ಯುವ ಸಮೂಹವನ್ನು ರಂಜಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಉಪಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮೂಹ ಸಂಭ್ರಮಿಸಿತು. ಮೊದಲ ದಿನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಯುವಸಮೂಹಕ್ಕೆ ಕಿಚ್ಚು ಹಚ್ಚಿಸಿದಂತೆ ಎರಡನೇ ದಿನ ರಘು ದೀಕ್ಷಿತ್ ತಮ್ಮ ಅದ್ಭುತ ಗಾಯನದ ಮೂಲಕ ನೆರೆದಿದ್ದ ಪ್ರೇಕ್ಷಕರ ಮನಗೆದ್ದರು.
ನಮಸ್ಕಾರ ಮೈಸೂರು ಎನ್ನುತ್ತಲೇ ರಘು ದೀಕ್ಷಿತ್ ವೇದಿಕೆ ಏರುತ್ತಿದ್ದಂತೆ ಸಭಿಕರು ಶಿಳ್ಳೆ, ಚಪ್ಪಾಳೆ ಮಾಡಿ ಸ್ವಾಗತಿಸಿದರು. ರಘು ದೀಕ್ಷಿತ್ ಹಾಡಿಗೆ ಯುವಕರು ಕೂಡ ಕೋರಸ್ ಹಾಡಿದರು. ‘ಲೋಕದ ಕಾಳಜಿ ಮಾಡತ್ತಿ ಯಾಕ…’ ಎನ್ನುತ್ತಿದ್ದಂತೆ ಸಭಿಕರು ಹುಚ್ಚೆದ್ದು ಕುಣಿದರು. ಇಡೀ ಗೀತೆ ಮುಗಿಯುವರೆಗೂ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಲೇ ಇದ್ದರು. ನಂತರ ‘ಜಸ್ಟ್ ಮಾತ್‌ಮಾತಲ್ಲಿ’ ಸಿನಿಮಾದ ಮುಂಜಾನೆ ಮಂಜಲ್ಲಿ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಹೊಸ ಲೋಕವನ್ನೇ ಸೃಷ್ಟಿಸಿದರು. ‘ಗುಡಿ ಗುಡಿಯಾ ಸೇದಿ ನೋಡೋ’ ಹಾಗೂ ಕೋಡಗನಾ ಕೋಳಿ ನುಂಗಿತ್ತಾ ಗೀತೆಗೆ ವೇದಿಕೆ ಹಿಂಭಾಗದ ಇದ್ದ ಯುವಕರು ಒನ್ಸ್ ಮೋರ್ ಎನ್ನುತ್ತಾ ಸಂಭ್ರಮಿಸಿದರು.
ಇದಕ್ಕೂ ಮುನ್ನ ಸಂಜಿತ್ ಹೆಗ್ಡೆ ‘ಜೇಮ್ಸ್ ಸಿನಿಮಾದ ಜೈಯೋ’ ಗೀತೆಯನ್ನು ಹಾಡುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರಲ್ಲಿ ಜೋಶ್ ತುಂಬಿತು. ‘ತಾಯಿ ತಕ್ಕ ಮಗ’ ಸಿನಿಮಾದ ‘ಮರಳಿ ಮನಸಾಗಿದೆ ನಿನ್ನ ಹೃದಯಕ್ಕೆ’ ಹಾಡು ಹಾಡುತ್ತಿದ್ದಂತೆ ಯುವಕರು ಕೋರಸ್ ಕೊಟ್ಟರು. ‘ಮಳೆಯೇ ಮಳೆಯೇ’ ಗಾಯನವಂತೂ ಯುವಜನರ ಮನವು ಪ್ರೀತಿಯಲ್ಲಿ ತೇಲುವಂತೆ ಮಾಡಿತು. ನಡುವೆ ಅಂತರವಿರಲಿ ಸಿನಿಮಾದ ‘ಶಾಕುಂತ್ಲೆ ಸಿಕ್ಕಳು ಸುಮ್‌ಸುಮ್ನೆ ನಕ್ಕಳು’ ಗೀತೆ ಹಾಡುತ್ತಿದ್ದಂತೆ ಯುವಪಡೆ ಜೋರಾಗಿ ಸ್ಯಾಂಡ್ ಕೊಟ್ಟು, ತಾವು ಸಹ ಈ ಗೀತೆಯನ್ನು ಹಾಡುವುದರ ಮೂಲಕ ಸಂಜಿತ್ ಹೆಗಡೆ ಅವರಿಗೆ ಸಾಥ್ ಕೊಟ್ಟರು. ‘ಜಂಟಲ್ ಮನ್’ ಸಿನಿಮಾದ ‘ಬೆಳಕಿನ ಕವಿತೆ’ ಹಾಡು ಹಾಡುತ್ತಿದ್ದಂತೆ ಯುವ ಜನರು ಜೋರಾಗಿ ಕೂಗಿ ಸಂಭ್ರಮಿಸಿದರು. ಅದೇ ರೀತಿ ‘ಹಾಯಾಗಿದೆ ಎದೆಯೊಳಗೆ’ ಗೀತೆಯಂತೂ ಯುವಕರ ಎದೆಯಲ್ಲಿ ಪ್ರೇಮ ಕಾವ್ಯ ಬರೆಯಿತು. ‘ಅಲೆ ಮಾರಿಯಾ’, ‘ಘಾಟಿಯಾ ಹಿಡಿದು’ ಹಾಡುಹಾಡುತ್ತಿದ್ದಂತೆ ಪ್ರೇಕ್ಷಕರು ಕುಳಿತಲ್ಲೇ ಹೆಜ್ಜೆ ಹಾಕಿದ್ದರು. ‘ಸಲಗ ಸಿನಿಮಾದ ಟೈಟಲ್ ಸಾಂಗ್ ಅನ್ನು ಹಾಡಿ ರಂಜಿಸಿದರು. ಇದಕ್ಕೆ ಯುವ ಪಡೆ ತಮ್ಮ ಮೊಬೈಲ್‌ನಲ್ಲಿ ಫ್ಲಾಶ್ ಲೈಟ್ ಆನ್ ಮಾಡಿ ಯುವ ಸಂಭ್ರಮದಲ್ಲಿ ಸೇರಿದ ಯುವ ಜನತೆ ಸಂಭ್ರಮಿಸಿದರು…