
ಮೈಸೂರು ಹೊರವಲಯದಲ್ಲಿ ಗುಂಡಿನ ಸದ್ದು…ರಾಬರಿ ಆರೋಪಿಗೆ ಫೈರಿಂಗ್…ಮಹಜರ್ ವೇಳೆ ತಪ್ಪಿಸಿಕೊಳ್ಳುವ ಯತ್ನ…ಪೊಲೀಸರ ಮೇಲೆ ದಾಳಿ…ಆರೋಪಿ ಕಾಲಿಗೆ ಗುಂಡೇಟು…
- Crime
- March 22, 2025
- No Comment
- 422
ಮೈಸೂರು,ಮಾ22,Tv10 ಕನ್ನಡ
ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.ಮಹಜರ್ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ಹಿನ್ನಲೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ.ಆರೋಪಿ ನಡೆಸಿದ ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಪೇದೆಯೊಬ್ಬರು ಗಾಯಗೊಂಡಿದ್ದಾರೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಬಳಿ ಘಟನೆ ನಡೆದಿದೆ.ಕೇರಳಾ ಮೂಲದ ಆರೋಪಿ ಆದರ್ಶ್ ಗೆ ಗುಂಡೇಟು ಬಿದ್ದಿದೆ.ಆರೋಪಿ ದಾಳಿ ನಡೆಸಿದ ಪರಿಣಾಮ ಜಯಪುರ ಠಾಣೆ ಎಸ್ಸೈ ಪ್ರಕಾಶ್ ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಹಳ್ಳಿ ಬಳಿ ಹಾಡುಹಗಲೇ ಕೇರಳಾ ಮೂಲದ ಉದ್ಯಮಿಯನ್ನ ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು.ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು ಈಗಾಗಲೇ 3 ಆರೋಪಿಗಳನ್ನ ಬಂಧಿಸಿದ್ದಾರೆ.ಇನ್ನೂ ಮೂವರು ಆರೋಪಿಗಳನ್ನ ಕೇರಳಾದಲ್ಲಿ ಬಂದಿಸಲಾಗಿದ್ದು ಈ ಪೈಕಿ ಆದರ್ಶ್ ಸಹ ಒಬ್ಬ.ದರೋಡೆ ನಡೆದ ಸ್ಥಳದ ಬಳಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು.ಇದರ ಮಾಲೀಕ ಆದರ್ಶ್ ಎಂದು ಪತ್ತೆಹಚ್ಚಲಾಗಿತ್ತು.ಆದರ್ಶ್ ಹಾಗೂ ಸಂಗಡಿಗಳ ಬಂಧನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದ ಜಿಲ್ಲಾ ಪೊಲೀಸರಿಗೆ ಬಂಧನ ಸವಾಲಾಗಿತ್ತು.ಕೊನೆಗೂ ಆದರ್ಶ್ ಪೊಲೀಸರ ಬಲೆಗೆ ಬಿದ್ದಿದ್ದ.ಈತನ ಕಾರು ದೊರೆತ ಸ್ಥಳಕ್ಕೆ ಮಹಜರ್ ನಡೆಸುವ ಸಲುವಾಗಿ ಜಯಪುರ ಸಬ್ ಇನ್ಸ್ಪೆಕ್ಟರ್ ಪ್ರಕಾಶ್,ಪಿರಿಯಾಪಟ್ಟಣ ಸಿಪಿಐ ದೀಪಕ್ ಹಾಗೂ ಇಬ್ಬರು ಸಿಬ್ಬಂದಿಗಳು ಕರೆದೊಯ್ದಿದ್ದಾರೆ.ಕಾರು ಪತ್ತೆಯಾದ ಸ್ಥಳವನ್ನ ಆದರ್ಶ್ ಗುರುತಿಸಿದ್ದಾನೆ.ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತಿದ್ದಾನೆ.ಯಾರೋ ಕುಡಿದು ಬಿಸಾಕಿದ್ದ ಬಿಯರ್ ಬಾಟಲಿ ಈತನ ಕೈಗೆ ಸಿಕ್ಕಿದೆ.ಬಾಟಲಿಯನ್ನ ಹೊಡೆದು ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ಪ್ರಕಾಶ್ ರವರು ಸಾಕಷ್ಟು ಬಾರಿ ಶರಣಾಗುವಂತೆ ಮನವಿ ಮಾಡಿದರೂ ದಾಳಿ ನಡೆಸಲು ಮುಂದಾಗಿದ್ದಾನೆ.ಈ ವೇಳೆ ಜೊತೆಯಲ್ಲಿದ್ದ ಇನ್ಸ್ಪೆಕ್ಟರ್ ದೀಪಕ್ ಆತ್ಮರಕ್ಷಣೆಗಾಗಿ ತಮ್ಮಲ್ಲಿದ್ದ ಪಿಸ್ತೂಲ್ ನಿಂದ ಆದರ್ಶ್ ಮೇಲೆ ಗುಂಡು ಹಾರಿಸಿದ್ದಾರೆ.ಆದರ್ಶ್ ಎಡಗಾಲಿಗೆ ಗುಂಡು ತಗುಲಿ ಬಿದ್ದಿದ್ದಾನೆ.ಗಾಯಗೊಂಡ ಪ್ರಕಾಶ್ ಹಾಗೂ ಹರೀಶ್ ಮತ್ತು ಆದರ್ಶ್ ರನ್ನು ಕೆ.ಆರ್.ಆಸ್ಪತ್ರೆಗೆ ಕರೆತರಲಾಗಿದೆ.ಪ್ರಕಾಶ್,ಹರೀಶ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.ಗುಂಡು ತಗುಲಿದ ಆದರ್ಶ್ ನನ್ನು ಮೇಟಗಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್,ಡಿವೈಎಸ್ಪಿ ಕರೀಂ ರಾವ್ ತರ್,ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…