ಭಾರತ ಐಕ್ಯತೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಮಧು ಜಿ.ಮಾದೇಗೌಡ
- TV10 Kannada Exclusive
- February 28, 2023
- No Comment
- 76
ಭಾರತ ಐಕ್ಯತೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಮಧು ಜಿ.ಮಾದೇಗೌಡ
ಮಂಡ್ಯ,ಫೆ,28:- ಮಹಾತ್ಮ ಗಾಂಧಿಜೀಯವರು ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ನಿಟ್ಟಿನಲ್ಲಿ ಭಾರತದ ಐಕ್ಯತೆಯಲ್ಲಿ ಮಹಿಳಾ ಪಾತ್ರ ಪ್ರಮುಖ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಗಾಂಧಿ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರಾದ ಮಧು ಜಿ.ಮಾದೇಗೌಡ ಅವರು ತಿಳಿಸಿದರು.
ಅವರು ಇಂದು ಭಾರತ ಸರ್ಕಾರ ಕೇಂದ್ರ ಸಂವಹನ ಇಲಾಖೆ ಮೈಸೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮಹಾತ್ಮ ಗಾಂಧೀ ಸ್ಮಾರಕ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಮಂಡ್ಯ ನಗರದ ಗಾಂಧಿಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಕುರಿತ ಜೀವನ ಚರಿತ್ರೆ, ಸ್ವಾತಂತ್ರ್ಯ ಹೋರಾಟದ ಮಾಹಿತಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರ ಸಾಧನೆಯ ಮಾಹಿತಿಗಳನ್ನು ಒಳಗೊಂಡಂತೆ ಛಾಯಾಚಿತ್ರವನ್ನು ಪ್ರದರ್ಶಿಸಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವ ಕೇಂದ್ರ ಸಂವಹನ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.
ಮಹಿಳೆಯರಿಗಾಗಿ ಇಂತಹ ಹತ್ತು ಹಲವಾರು ಕಾರ್ಯಕ್ರಮವನ್ನು ಆಯೋಜಿಸಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದರು.
ಇಂದಿನ ಯುಗದಲ್ಲಿ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವವರು ಸಾಕಷ್ಟಿದ್ದಾರೆ ಅಂತಹವರನ್ನು ಗುರುತಿಸಿ ಅವರನ್ನು ಪ್ರೋತ್ಸಹಿಸಬೇಕಿದೆ ಎಂದರು.
ಕ್ಷೇತ್ರ ಸಂವಹನ ಕಾರ್ಯಾಲಯದ ಉಪ ನಿರ್ದೇಶಕರಾದ ಡಾ.ಟಿ.ಸಿ ಪೂರ್ಣಿಮಾ ಅವರು ಮಾತನಾಡಿ ಸರ್ಕಾರದ ಯೋಜನೆಗಳಲ್ಲಿ ಸಾಕಷ್ಟು ಜನೋಪಯೋಗಿ ಯೋಜನೆಗಳು ಇವೆ, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಆಯುಷ್ಮಾನ್ ಆರೋಗ್ಯ ಕಾರ್ಡ್, ಬೆಳೆ ವಿಮೆ ಹೀಗೆ ಹಲವಾರು ಯೋಜನೆಗಳಿವೆ. ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು
ಇದೇ ಸಂದರ್ಭದಲ್ಲಿ ಮಹಿಳೆಯರು ಸಾಧನೆ ಮಾಡಿರುವ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು. ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಎಸ್ ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎ.ಪಿ ರಮೇಶ್, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೆಶಕರಾದ ಎಸ್.ಎಚ್ ನಿರ್ಮಲ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ, ಮೇಲ್ವಿಚಾರಕಿ ಲಕ್ಷ್ಮೀ, ಕ್ಷೇತ್ರ ಪ್ರಚಾರ ಸಹಾಯಕರಾದ ಪಿ.ದರ್ಶನ್ ಸೇರಿದಂತೆ ಇತರರು ಹಾಜರಿದ್ದರು.