- March 14, 2023
ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರ ಸಹಕಾರ ಮುಖ್ಯ: ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ

ಮಂಡ್ಯ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರ ಸಹಕಾರ ಮುಖ್ಯ: ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ
ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪೆಟ್ರೋಲ್ ಬಂಕ್, ರೈಸ್ ಮಿಲ್, ಹೋಟೆಲ್, ಪ್ರಿಂಟಿಂಗ್ ಪ್ರೆಸ್, ಮದ್ಯ ಮಾರಾಟಗಾರರ ಸನ್ನದುದಾರರ ಸಂಘದ ಮುಖ್ಯಸ್ಥರ ಜೊತೆ ಸಭೆ ನಡೆಸಿ ಮಾತನಾಡಿದರು.
ಮತದಾರರಿಗೆ ಆಮಿಷ ಒಡ್ಡಲು ವರ್ತಕರಿಂದ ಒಂದೇ ಬಾರಿ ಹೆಚ್ಚು ವಸ್ತುಗಳನ್ನು ಖರೀದಿಸುವುದು, ಸಾಗಾಣಿಕೆ ಮಾಡುವುದು ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಕಂಡು ಬಂದಾಗ ಕ್ರಮ ಜರುಗಿಸಲಾಗುವುದು ಎಂದರು.
ವಿವಿಧ ರೀತಿಯಲ್ಲಿ ಕೂಪನ್ ಗಳನ್ನು ನೀಡಿ ಮತದಾರರಿಗೆ ಬಟ್ಟೆ, ಆಹಾರ ಪದಾರ್ಥ, ಪೆಟ್ರೋಲ್ ಹಾಗೂ ಮತ್ತಿತ್ತರ ವಸ್ತುಗಳನ್ನು ನೀಡುವ ಸಾಧ್ಯತೆ ಇರುತ್ತದೆ, ಇದಕ್ಕೆ ವರ್ತಕರು ಸಹಕರಿಸಬಾರದು, ಇಂತಹ ಪ್ರಕರಣಗಳ ಕಂಡು ಬಂದಲ್ಲಿ ದೂರು ಸಲ್ಲಿಸಬೇಕು ಎಂದರು.
ಬ್ಯಾಂಕ್ ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹೆಚ್ಚು ಮೊತ್ತದ ಹಣದ ವರ್ಗಾವಣೆ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಖಾತೆಯಿಂದ ದೊಡ್ಡ ಮೊತ್ತದ ನಗದು ಹಣವನ್ನು ತೆಗೆಯುವುದು ಕಂಡುಬಂದಲ್ಲಿ ನಿಗವಹಿಸಿ ಪರಿಶೀಲಿಸಿ ವರದಿ ನೀಡುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ ಮಂಡ್ಯ ಜಿಲ್ಲೆಯನ್ನು ರೇಡ್ ಅಲರ್ಟ್ ಜಿಲ್ಲೆಯ ವಿಭಾಗದಲ್ಲಿ ಗುರುತಿಸಿ, ಹೆಚ್ಚಿನ ನಿಗಾ ವಹಿಸುತ್ತಿದೆ. ಚುನಾವಣೆ ಅಕ್ರಮಗಳಲ್ಲಿ ವಿವಿಧ ವ್ಯಾಪಾರಸ್ಥರು ಭಾಗಿಯಾಗಿರುವುದು ಕಂಡು ಬಂದಲ್ಲಿ ನಿಯಾಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚೆರಿಕರ ನೀಡಿದರು.
ಚುನಾವಣಾ ಕೆಲಸಕ್ಕಾಗಿ 127 ಸೆಕ್ಟರ್ ಅಧಿಕಾರಿಗಳು, 35 ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ನೇಮಕ ಮಾಡಲಾಗಿದೆ. 34 ಚೆಕ್ ಪೋಸ್ಟ್ ಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಚೆಕ್ ಪೋಸ್ಟ್ ಗಳು ಕಾರ್ಯಪ್ರವೃತ್ತವಾಗಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಅವರು ಮಾತನಾಡಿ ಭ್ರಷ್ಟಾಚಾರ ಮಾಡುವುದು ಎಷ್ಟು ಅಪರಾಧ ಅದಕ್ಕೆ ಸಹಕರಿಸುವುದು ಕೂಡ ಅಷ್ಟೇ ಅಪರಾಧವಾಗುತ್ತದೆ. ಆಗಾಗಿ ಮತದಾರರಿಗೆ ಆಮಿಷ ಒಡ್ಡುವ ಹಾಗೂ ಭ್ರಷ್ಟಾಚಾರಕ್ಕೆ ಸಹಕರಿಸುವ ಬಗ್ಗೆ ದೂರು ಕೇಳಿ ಬಂದರೆ ನಿಯಾಮಾನುಸಾರ ಎಫ್.ಐ.ಆರ್ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಅಬಕಾರಿ ಉಪ ಆಯುಕ್ತೆ ಮಹದೇವಿ ಬಾಯಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು