
ಜಿಲ್ಲಾಧಿಕಾರಿಗಳಿಂದ ಎಸ್.ಡಿ ಜಯರಾಮ್ ನಗರ ಪರಿಶೀಲನೆ
- TV10 Kannada Exclusive
- March 18, 2023
- No Comment
- 41

ಜಿಲ್ಲಾಧಿಕಾರಿಗಳಿಂದ ಎಸ್.ಡಿ ಜಯರಾಮ್ ನಗರ ಪರಿಶೀಲನೆ

ಮಂಡ್ಯ ನಗರ ವ್ಯಾಪ್ತಿಯ ಎಸ್.ಡಿ ಜಯರಾಮ್ ನಗರಕ್ಕೆ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಭೇಟಿ ನೀಡಿ ಮೂಲಭೂತ ಸೌಕರ್ಯ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸಿ ನಂತರ ಮಾತನಾಡಿದ ಜಿಲ್ಲಾಧಿಕಾರಿ ಅವರು ಮೂಲಭೂತ ಸೌಕರ್ಯಗಳಾದ ಚರಂಡಿ ವ್ಯವಸ್ಥೆ, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ರಸ್ತೆ ಸೌಲಭ್ಯ, ಶೌಚಾಲಯ ವ್ಯವಸ್ಥೆ, ವಾಸಸ್ಥಳ ದೃಢೀಕರಣ ಪತ್ರ, ಸಾರಿಗೆ ವ್ಯವಸ್ಥೆ ಹಾಗೂ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಸರಿಯಾದ ದಾಖಲೆಗಳನ್ನು ಕೊಟ್ಟು ಸಹಕರಿಸಿ ಎಂದರು.
ಎಸ್ ಡಿ ಜಯರಾಮ್ ನಗರವನ್ನು ನಗರಸಭೆಗೆ ಸೇರಿಸಬೇಕೆಂದು ಎಸಿ ಅವರ ಅಧ್ಯಕ್ಷತೆಯಲ್ಲಿ ಸಭೆಯಾಗಿದೆ. ಆ ಸಭೆಯ ನಡಾವಳಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದರು.
ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ. ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅವರು ಸ್ಥಳದಲ್ಲೇ ಇದ್ದು, ಮನೆ ಮನೆಗೆ ಹೋಗಿ ಮತದಾರರ ಪಟ್ಟಿಯಲ್ಲಿನ ಹೆಸರಿನ ಬಗ್ಗೆ ಪರಿಶೀಲಿಸುತ್ತಾರೆ. 18 ವರ್ಷ ತುಂಬಿದ ಯುವಕ,ಯುವತಿಯರು ಹಾಗೂ ಕಾರಣಾಂತರಗಳಿಂದ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದರೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುತ್ತಾರೆ ಎಂದರು.
ಗ್ರಾಮ ಪಂಚಾಯತಿಗೆ ಇಲ್ಲಿನ ಸ್ವಚ್ಚತೆ ಕಾಪಾಡಲು ಸೂಚಿಸಲಾಗಿದೆ. ಮತ್ತೆ ರಾತ್ರಿ ಹೊತ್ತು ಹೊರ ಊರಿನ ಯುವಕರು ಬಂದು ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಪೊಲಿಸ್ ಇಲಾಖೆಯವರು ಕ್ರಮ ಕೈಗೊಂಡು ರಾತ್ರಿ ಸಮಯದಲ್ಲಿ ಗಸ್ತು ಹೆಚ್ಚಿಸುತ್ತಾರೆ.ಸ್ಥಳೀಯರು ಪೊಲೀಸರೊಂದಿಗೆ ಸಹಕರಿಸಿದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಉಪವಿಭಾಗಾಧಿಕಾರಿ ಎಸ್ ಹೆಚ್ ಕೀರ್ತನ, ತಾಲ್ಲೂಕು ಪಂಚಾಯತ ಇಓ ವೇಣುಗೋಪಾಲ ಸೇರಿದಂತೆ ಇನ್ನಿತರರು ಇದ್ದರು.