ವೈರಮುಡಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ : ಡಾ: ಹೆಚ್ ಎನ್ ಗೋಪಾಲಕೃಷ್ಣ
- TV10 Kannada Exclusive
- March 25, 2023
- No Comment
- 87
ವೈರಮುಡಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ : ಡಾ: ಹೆಚ್ ಎನ್ ಗೋಪಾಲಕೃಷ್ಣ
ಮಂಡ್ಯ,ಮಾ, 26:-ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾಚ್೯ 27 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.ಏಪ್ರಿಲ್ 1 ರಂದು ವೈರಮುಡಿ ಕಿರೀಟಧಾರಣೆ ನಡೆಯಲಿದೆ. ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ನಡೆಯಬೇಕು ಎಂದರು.
ಕುಡಿಯುವ ನೀರಿನ ಟ್ಯಾಂಕರ್ ಗಳು ಅಗತ್ಯತೆಗೆ ತಕ್ಕಂತೆ ವ್ಯವಸ್ಥೆಯಾಗಬೇಕು. ಬಿಸಿಲು ಹೆಚ್ಚಿರುವುದರಿಂದ ಟ್ಯಾಂಕರ್ ಗೆ ಖಾಲಿಯಾದ ನಂತರ ಮರುಪೂರಣವಾಗಬೇಕು. ಶೌಚಾಲಯ, ವಾಹನ ನಿಲುಗಡೆ, ವಯಸ್ಸಾದವರು ಹಾಗೂ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆಯಾಗಬೇಕು ಎಂದರು
ಏ.1 ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವ ನಡೆಯಲಿದೆ. ರಾಜಮುಡಿ ಹಾಗೂ ವೈರಮುಡಿಯನ್ನು ಜಿಲ್ಲಾಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಭದ್ರತಾ ವ್ಯವಸ್ಥೆಯಾಗಬೇಕು. ಜಿಲ್ಲಾ ಖಜಾನೆಯಿಂದ, ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನ, ಇಂಡುವಾಳು, ತೂಬಿನಕೆರೆ, ಗಣಂಗೂರು,ಶೆಟ್ಟಿಹಳ್ಳಿ, ಕಿರಂಗೂರು ಬನ್ನಿಮಂಟಪ, ಕೂಡಲಕುಪ್ಪೆ ಗೇಟ್, ದರಸಗುಕುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಪಾಂಡವಪುರ, ಹಿರೇಮರಳಿ ಗೇಟ್, ಬಣಘಟ್ಟ,ಟಿ.ಎಸ್.ಛತ್ರ,, ಮಹದೇಶ್ವರ ಪುರ, ಬೆಳ್ಳಾಳೆ, ಜಕ್ಕನಹಳ್ಳಿ, ತಗಲಕೆರೆ ಹಾಗೂ ಮೇಲುಕೋಟೆ ತಲುಪಲಿದೆ ಎಂದರು.
ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ರಾಜಮುಡಿ ಹಾಗೂ ವೈರಮುಡಿ ಸಾಗುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದಾದರೂ ಸ್ಥಳ ಬಿಟ್ಟಿ ಹೋಗಿದ್ದಲ್ಲಿ ಸೇರಿಸಿ. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಎಂದರು.
ಆರೋಗ್ಯ ಇಲಾಖೆ ವತಿಯಿಂದ ಅಂಬ್ಯೂಲೆನ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು, ಕೊಳದ ಹತ್ತಿರ ನುರಿತ ಈಜುಗಾರರನ್ನು ನಿಯೋಜನೆ, ಸಿ.ಸಿ.ಟಿ.ವಿ ಅಳವಡಿಕೆ, ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಅವರು ಮಾತನಾಡಿ ಮೇಲುಕೋಟೆಯ ವೈರಮುಡಿಗೆ ಬೇರೆ ಜಿಲ್ಲೆ, ರಾಜ್ಯ ಹಾಗೂ ಜಿಲ್ಲೆಯ ಭಕ್ತಾಧಿಗಳು ಆಗಮಿಸಲಿದ್ದಾರೆ. ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆಯಾಗಬೇಕು. ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತರುವಾಗ ಗ್ರಾಮಸ್ಥರು ಪೂಜೆ ಸಲ್ಲಿಸುವ ಸ್ಥಳಗಳನ್ನು ಗುರುತಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ನುರಿತ ಕಲಾವಿದರಿಗೆ ಅವಕಾಶ ನೀಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಎ.ಎಸ್.ಪಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ನಂದೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬ್ರಹ್ಮೋತ್ಸವದ ವಿವರ ಮಾಚ್೯ 27 ರಂದು ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ(ಮೃತ್ತಿಕಾ ಸಂಗ್ರಹಣೆ), ಮಾಚ್೯ 28 ರಂದು ಕಲ್ಯಾಣೋತ್ಸವ -ಧಾರಾಮಹೋತ್ಸವ -ಅಧಿವಾಸನ- ರಕ್ಷಾ ಬಂಧನ – ಧ್ವಜ ಪ್ರತಿಷ್ಠೆ , ಮಾಚ್೯ 29 ರಂದು ಧ್ವಜಾರೋಹಣ- ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ,ಭೇರಿತಾಡನ- ತಿರುಪ್ಪರೈ – ಹಂಸವಾಹನ -ಯಾಗಶಾಲಾ ಪ್ರವೇಶ, ಮಾಚ್೯ 30 ರಂದು ಶ್ರೀರಾಮನವಮಿ -ಶೇಷವಾಹನ ಪಡಿಯೇತ್ತ, ಮಾಚ್೯ 31 ರಂದು ನಾಗವಲ್ಲಿ ಮಹೋತ್ಸವ- ನರಾಂಧೋಳಿಕಾರೋಹಣ -ಚಂದ್ರಮಂಡಲ ವಾಹನ -ಪಡಿಯೇತ್ತ, ಏಪ್ರಿಲ್ 1 ರಂದು ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ- ಪಡೆಯೇತ್ತ, ಏಪ್ರಿಲ್ 2 ರಂದುಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ಏಪ್ರಿಲ್ 3 ರಂದು ಗಜೇಂದ್ರ ಮೋಕ್ಷ -ಅನೆವಸನ್ತ-ಕುದುರೆ ವಾಹನ -ಆನೆ ವಾಹನ ವಿಶೇಷ ಪಡಿಯೇತ್ತ, ಏಪ್ರಿಲ್ 4ರಂದು – ಶ್ರೀ ಮನ್ಮಹಾರಥೋತ್ಸವ ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವರಾಯಸ್ವಾಮಿ ಮತ್ತು ಶ್ರೀವರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಧಿಯಲ್ಲಿ ಬಂಗಾರ ಪಲ್ಲಕ್ಕಿ ಉತ್ಸವ, ಏಪ್ರಿಲ್ 5 ರಂದು ಪಂಗುನ್ಯುತ್ತರಮ್ – ತೆಪ್ಪೋತ್ಸವ – ಡೋಲೋತ್ಸವ ಕುದುರೆ ವಾಹನ – ಕಳ್ಳರ ಸುಲಿಗೆ, ಏಪ್ರಿಲ್ 6 ರಂದು ಶ್ರೀ ನಾರಾಯಣಸ್ವಾಮಿ ಜಯನ್ತಿ, ಸಂಧಾನ ಸೇವೆ – ಚೂರ್ಣಾಭಿಷೇಕ – ಅವಭೃಥ – ಪಟ್ಟಾಭಿಷೇಕ ಪುಷ್ಪಮಂಟಪಾರೋಹಣ – ಸಮರಭೂಪಾಲ ವಾಹನ – ಪಡಿಮಾಲೆ – ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, ಏಪ್ರಿಲ್ 7 ರಂದು ಶ್ರೀ ನಾರಾಯಣ ಸ್ವಾಮಿಗೆ ಮಹಾಭಿಷೇಕ – ಪುಷ್ಪಯಾಗ – ಕತ್ತಲು ಪ್ರದಕ್ಷಿಣೆ – ಹನುಮಂತವಾಹನ – ಉದ್ಘಾಸನ ಪ್ರಬಂಧ, ಏಪ್ರಿಲ್ 8 ರಂದು ಶ್ರೀ ಅಮ್ಮನವರಿಗೆ ಶ್ರೀ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ ಕೋಡೈ ತಿರುನಾಳ್ ಉತ್ಸವ ನಡೆಯಲಿದೆ.