ನೀರು ತುಂಬಿಸಲು ಕೆರೆ ಕೋಡಿಯನ್ನು ಭದ್ರಪಡಿಸಿ: ಡಾ:ಎಚ್ ಎಲ್ ನಾಗರಾಜ್
- TV10 Kannada Exclusive
- March 28, 2023
- No Comment
- 57
ನೀರು ತುಂಬಿಸಲು ಕೆರೆ ಕೋಡಿಯನ್ನು ಭದ್ರಪಡಿಸಿ: ಡಾ:ಎಚ್ ಎಲ್ ನಾಗರಾಜ್
ಮಂಡ್ಯ,ಮಾ28:-ಕಳೆದ ಬಾರಿ ಭಾರಿ ಮಳೆಯ ಹಿನ್ನಲೆ ಕೆರೆ ಕೋಡಿಗಳು ಹೊಡೆದಿರುತ್ತದೆ. ಮಳೆ ನೀರು ತುಂಬಿಸಲು ಕೆರೆ ಕೋಡಿಯನ್ನು ಭದ್ರಪಡಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎಚ್.ಎಲ್ ನಾಗರಾಜ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಸಿಲಿನ ತೀವ್ರತೆ ಹೆಚ್ಚಿದ್ದು, ಕೆರೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಪರಿಶೀಲಿಸಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಿ. ಕುಡಿಯುವ ನೀರಿನ ಕೊರತೆ ಉಂಟಾಗುವ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ಯೋಜನೆ ಸಿದ್ಧಪಡಿಸಿ ಎಂದರು.
ತೀವ್ರ ಬಿಸಿಲು ಹಾಟ್ ವೇವ್ ನಿಂದ ಉಂಟಾಗುವ ತೊಂದರೆಯ ಬಗ್ಗೆ ಜಿಲ್ಲೆಯಲ್ಲಿ ಕಳೆದ ಸಾಲುಗಳಲ್ಲಿ ಯಾವುದೇ ವರದಿಯಾಗದಿರುವ ಬಗ್ಗೆ ಹಾಗೂ 26 ವಾರಗಳವರೆಗೆ ಜಾನುವಾರುಗಳಿಗೆ ಮೇವಿನ ಸಂಗ್ರಹಣೆ ಇರುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಖಚಿತ ಪಡಿಸಿಕೊಂಡರು.
ಜಿಲ್ಲೆಯಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಒದಗಿಸಬೇಕಾದ ಸಂದರ್ಭದಲ್ಲಿ ಸರ್ಕಾರ ನೀಡಿರುವ ನಿಯಮಗಳನ್ನು ಪಾಲಿಸಿ ಉಪವಿಭಾಗಾಧಿಕಾರಿಗಳ ಮೂಲಕ ಪಾವತಿಗಾಗಿ ಬಿಲ್ ಸಲ್ಲಿಸಿ ಎಂದರು.
2022-23 ನೇ ಸಾಲಿನಲ್ಲಿ ಮಳೆಹಾನಿಯಾದ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ನೀಡಲಾಗಿರುವ ಹಲವು ದುರಸ್ತಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. 15 ದಿನದೊಳಗಾಗಿ ದುರಸ್ತಿ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪೂರ್ಣಗೊಳಿಸಿ ವರದಿ ನೀಡಬೇಕು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್ ಧನಂಜಯ, ತಹಶೀಲ್ದಾರ್ ವಿಜಯಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.