
ಹಸಿರು ಕ್ರಾಂತಿಯ ಹರಿಕಾರರಾಗಿ ಭಾರತ ದೇಶಕ್ಕೆ ದಿಕ್ಕು ತೋರಿಸಿದವರು ಡಾ.ಬಾಬು ಜಗಜೀವನ ರಾಮ್: ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ
- TV10 Kannada Exclusive
- April 5, 2023
- No Comment
- 134

ಮಂಡ್ಯ,ಏ,05:-ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಇವರು ಮಂತ್ರಿಮಂಡಲದಲ್ಲಿ ಸಚಿವರಾಗಿ, ಭಾರತದ ಉಪ ಪ್ರಧಾನಿಯಾಗಿ, ಹಸಿರು ಕ್ರಾಂತಿ ಹರಿಕಾರರಾಗಿ ಭಾರತ ದೇಶಕ್ಕೆ ದಿಕ್ಕು ತೋರಿಸಿಕೊಟ್ಟರು ಎಂದು ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದ ಪಾರ್ಕ್ ನಲ್ಲಿ ಡಾ.ಬಾಬು ಜಗಜೀವನರಾಂ ಅವರ 116ನೇ ಜನ್ಮದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ನಾಯಕರಾಗಿ ಮುಂಚೂಣಿಯಲ್ಲಿದ್ದರು. ಇವರ ತತ್ವ ಆದರ್ಶಗಳನ್ನು ನಾವುಗಳು ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಸಮಾಜದಲ್ಲಿ ಧರ್ಮ ಜಾತಿಗಳ ನಡುವೆ ಘರ್ಷಣೆಗಳು ಉಂಟಾಗದಂತೆ ಮುನ್ನಡೆಯಲು ನಾವೂ ಒಂದೇ ಮನೋಭಾವ ಹಾಗೂ ಸಮಾನರು ಎಂಬ ದೃಷ್ಟಿಯಿಂದ ಮುಂದುವರೆಯಬೇಕಾಗುತ್ತದೆ ಎಂದು ಹೇಳಿದರು.
ಭಾರತ ಬಹುತ್ವದ ನೇಲವೀಡು. ಈ ನೆಲದ ಸಾಮರಸ್ಯದ ಧಾತುಗಳು ಭವ್ಯವಾದವು. ಈ ಪರಂಪರೆ ಶಿಥಿಲವಾಗದಂತೆ ನೋಡಿಕೊಂಡು, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಶ್ರೇಷ್ಠ ದೃಷ್ಟಿಕೋನ ಇಟ್ಟುಕೊಂಡವರು ಡಾ.ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ತಿಳಿಸಿದರು.
ಡಾ.ಬಾಬು ಜಗಜೀವನ ರಾಮ್ ಅವರು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ತಮ್ಮದೇ ಆದ ಕೊಡುಗೆಗಳನ್ನ ನೀಡುತ್ತಾ, ಸ್ವಾತಂತ್ರ್ಯ ನಂತರದಲ್ಲಿ ಬಹುತ್ವದ ಭಾರತ ಹೇಗಿರಬೇಕು ಎಂದು ದೂರದೃಷ್ಟಿವುಳ್ಳವರಾಗಿದ್ದರು. ಭಾರತದಿಂದ ಬ್ರಿಟಿಷರನ್ನು ಓಡಿಸಬೇಕು ಎಂದು ಹೋರಾಟ ನಡೆಯುತ್ತಿದ್ದಾಗ. ಮೊದಲು ಭಾರತೀಯ ಸಮಾಜದೊಳಗೆ ಇರುವ ಸಾಮಾಜಿಕ ಅಸಮಾನತೆಯನ್ನು ನಿವಾರಿಸಬೇಕು ಎಂದು ಪಣತೊಟ್ಟ ಹೋರಾಟ ನಡೆಸಿದರು ಎಂದರು.
ಭಾರತದ ಬಹುತೇಕ ಬಹುಜನ ಸಮಾಜದವರು ಸಾಮಾಜಿಕ, ಆರ್ಥಿಕ, ರಾಜಕೀಯ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಸ್ವಾತಂತ್ರ್ಯ ಚಳುವಳಿಯ ಜೊತೆಜೊತೆಗೆ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಡಾ.ಬಾಬು ಜಗಜೀವನ ರಾಮ್ ಅವರು ಎಂದರು.
ಭವಿಷ್ಯದ ಭಾರತಕ್ಕಾಗಿ ತಮ್ಮೊಳಗಿನ ನೋವನ್ನ ತಾವೇ ನುಂಗಿ ರಾಷ್ಟ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಟ್ಟವರು ಬುದ್ದ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರು ಎಂದು ಹೇಳಿದರು.
1951 ರಿಂದ 1986 ರವರೆಗೆ ಸತತವಾಗಿ 50 ವರ್ಷಗಳ ಕಾಲ ಸಂಸತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಕೆಲಸ ಮಾಡಿದರು. ಶೋಷಿತ ಸಮುದಾಯದವರು ಇಂತಹ ಮಹಾನ್ ವ್ಯಕ್ತಿಗಳ ಅದರ್ಶಗಳನ್ನು ಮೈಗೂಡಿಸಿಕೊಂಡು ಅವಕಾಶ ಸೃಷ್ಟಿ ಮಾಡಿಕೊಳ್ಳುವ ಕಡೆ ಯೋಚನೆ ಮಾಡಿ ದೇಶದ ಚುಕ್ಕಾಣಿ ಹಿಡಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಬಾಬು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ತಾಹಶಿಲ್ದಾರ್ ವಿಜಯಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯ ಶ್ರೀ, ವಿನೋದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.