ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಆರೋಪ…10 ಬಿಜೆಪಿ ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸದಂತೆ ಅಮಾನತು…
- TV10 Kannada Exclusive
- July 19, 2023
- No Comment
- 69
ಬೆಂಗಳೂರು,ಜು19,Tv10 ಕನ್ನಡ
ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಹಿನ್ನಕೆ ಬಿಜೆಪಿಯ10 ಶಾಸಕರು ಅಧಿವೇಶನ ಪಾಲ್ಗೊಳ್ಳದಂತೆ ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ. ಅಶಿಸ್ತಿನಿಂದ ವರ್ತಿಸಿದ ಆರೋಪದ ಮೇರೆಗೆ ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನ ಮುಗಿಯುವರೆಗೂ ವಿಧಾನಸಭೆ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದಂತೆ ಅಮಾನತ್ತು ಮಾಡಲಾಗಿದೆ.
ಬಿಜೆಪಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿ. ಸುನಿಲ್ ಕುಮಾರ್, ಆರ್.ಅಶೋಕ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜ್, ವೇದವ್ಯಾಸಕಾಮತ್, ಯಶಪಾಲ್ ಸುವರ್ಣ, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ವೈ. ಭರತ್ ಶೆಟ್ಟಿ ಅವರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಮಾನತ್ತು ಮಾಡಿರುವುದಾಗಿ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಭೋಜನ ವಿರಾಮದ ನಂತರ ಸದನ ಸಮಾವೇಶಗೊಂಡಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆಯಿತು.ಧರಣಿ ಕೈಬಿಟ್ಟು ಸ್ವಸ್ಥಾನಗಳಿಗೆ ತೆರಳುವಂತೆ ಮಾಡಿಕೊಂಡ ಮನವಿಗೆ ಪ್ರತಿಪಕ್ಷಗಳ ಶಾಸಕರು ಕಿವಿಗೊಡದಿದ್ದಾಗ ಸಭಾಧ್ಯಕ್ಷರು ಸದನದಲ್ಲಿ ಅಶಿಸ್ತಿನಿಂದ ವರ್ತಿಸಿದ ಹಾಗೂ ಸಭಾಧ್ಯಸಕ್ಷರ ಪೀಠಕ್ಕೆ ಅಗೌರವ ತೋರಿದರೆ ಸಹಿಸುವುದಿಲ್ಲ ಎಂದು ಹೇಳಿ ಬಿಜೆಪಿಯ ಹತ್ತು ಶಾಸಕರ ಹೆಸರನ್ನು ಉಲ್ಲೇಖಿಸಿ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಪ್ರಸ್ತಾವ ಮಂಡಿಸಿದರು.ಈ ಪ್ರಸ್ತಾವ ಬೆಂಬಲಿಸಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ಅಶಿಸ್ತು ಮತ್ತು ಅಗೌರವದಿಂದ ನಡೆದುಕೊಂಡ ಶಾಸಕರನ್ನು ಸದನ ನಿಯಮಾವಳಿ ಪ್ರಕಾರ ಈ ಅಧಿವೇಶನ ಮುಗಿಯುವವರೆಗೂ ಅಮಾನತ್ತು ಮಾಡುವಂತೆ ಕೋರಿದರು.ಆಗ ಸಭಾಧ್ಯಕ್ಷರು ಶಾಸಕರನ್ನು ಅಮಾನತ್ತುಗೊಳಿಸುವ ಪ್ರಸ್ತಾವವನ್ನುವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 348 ಪ್ರಕಾರ ಪ್ರಸಕ್ತ ಅಧಿವೇಶನ ಮುಗಿಯುವರೆಗೂ ಹತ್ತು ಶಾಸಕರು ಸದನಕ್ಕೆ ಹಾಜರಾಗುವುದನ್ನು ತಡೆಹಿಡಿಯಬೇಕು ಎಂಬ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ದ್ವನಿಮತದ ಒಪ್ಪಿಗೆ ದೊರೆಯಿತು.ಸದನದ ಕಲಾಪ ಮುಂದೂಡಿಕೆಯಾದ ನಂತರವೂ ಪ್ರತಿಪಕ್ಷಗಳ ಸದಸ್ಯರು ಸಭಾಧ್ಯಿಕ್ಷರ ಪೀಠದ ಮುಂದಿನ ಬಾವಿಯಲ್ಲೇ ಕೆಲಕಾಲ ಉಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಅಮಾನತ್ತುಗೊಂಡ ಶಾಸಕರನ್ನು ಮಾರ್ಷಲ್ ಗಳ ಮೂಲಕ ಸದನದಿಂದ ಹೊರ ಹಾಕಲಾಯಿತು…