ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ. ಪ್ರವೀಣ್ ಇನ್ನಿಲ್ಲ.
- TV10 Kannada Exclusive
- November 29, 2023
- No Comment
- 354
ಶ್ವಾಸಕೋಶದ ಸೋಂಕಿಗೆ ಒಳಗಾಗಿ ಕಳೆದ 16 ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ರಾ. ಪ್ರವೀಣ್, ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ 6 ಗಂಟೆಗೆ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಪತ್ನಿ ಕೋಮಲ, ಮಗ ತನೀಶ್ ಮತ್ತು ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಆನೇಕಲ್ ನಲ್ಲಿ ನಡೆಯಲಿದೆ ಎಂದು
ಕುಟುಂಬಸ್ಥರು ತಿಳಿಸಿದ್ದಾರೆ.
ಮೂಲತಃ ಆನೇಕಲ್ ನವರಾದ,ಶ್ರೀರಾಮ್ ಪುರ ವಾಸಿ ರಾ. ಪ್ರವೀಣ್ ಅಣ್ಣಾವ್ರ ಅಪ್ಪಟ ಅಭಿಮಾನಿ. ಜೊತೆಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಹುಚ್ಚು ಅಭಿಮಾನಿ. ಅವರಂತೆ ಹೇರ್ ಸ್ಟೈಲ್ ಮಾಡಿಕೊಂಡು ಇರುತ್ತಿದ್ದ ಪ್ರವೀಣ್ “ನೀನು ಶಿವರಾಜ್ ಕುಮಾರ್ ತರ ಇದ್ದಿಯಾ” ಎಂದು ಬಿಟ್ಟರೆ ಸಂತೋಷದಿಂದ ಉಬ್ಬಿ ಹೋಗುತ್ತಿದ್ದ. ಮುಂದೆ ಶಿವರಾಜಕುಮಾರ್ ಅವರ ಹೆಸರಲ್ಲಿ ಒಂದು ಪತ್ರಿಕೆಯನ್ನು ಅವರು ನಡೆಸಿದ್ದರು.
ಹಿರಿಯ ಪತ್ರಕರ್ತರು, ಸಾಹಿತಿ, ಕನ್ನಡ ಚಳುವಳಿ ನಾಯಕರಾದ ಜಾಣಗೆರೆ ಅಂಗಳದಿಂದ ಬಂದ ಪ್ರವೀಣ್, ಬರೆಯೋದನ್ನ ರೂಢಿಸಿಕೊಂಡು ಹಾಯ್ ಬೆಂಗಳೂರು,
ಅಗ್ನಿ ಪತ್ರಿಕೆ, ಚಾರ್ಜ್ ಶೀಟ್ ಪತ್ರಿಕೆಗಳಲ್ಲಿ ರೋಚಕ ಕ್ರೈಂ ಸ್ಟೋರಿಗಳನ್ನು ಬರೆದು ಹೆಸರು ಮಾಡಿದ್ದರು. ಪ್ರಜಾ ಟಿವಿಯಲ್ಲೂ ಒಂದಿಷ್ಟು ವರ್ಷ ಕೆಲಸ ಮಾಡಿದ್ದರು.
ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ಅವರ ಕ್ರೈಂ ಡೈರಿಗೆ ಸೇರಿಕೊಂಡ ಪ್ರವೀಣ್ ಅಲ್ಲೂ ಒಳ್ಳೆಯ ಹೆಸರು ಮಾಡಿದರು. ಸುಮಾರು 35 ವರ್ಷಗಳ ಸುದೀರ್ಘ ಕಾಲ
ಮಾಧ್ಯಮದಲ್ಲಿ ಕೆಲಸ ಮಾಡಿದ ರಾ.ಪ್ರವೀಣ್ ಇತ್ತೀಚೆಗೆ ತಮ್ಮದೇ ‘ ರಾ ‘ ಹೆಸರಿನ ಯೂ ಟ್ಯೂಬ್ ಚಾನೆಲ್ ಮಾಡಿಕೊಂಡು ಅದರಲ್ಲಿ ತೊಡಗಿಸಿ ಕೊಂಡಿದ್ದರು.
ಕೇಳಿದ್ದು: ರಾ.ಪ್ರವೀಣ್ , ಡಾ. ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಅಭಿಮಾನಿಗಳ ಸಹಜ ಆಸೆಯಂತೆ, ತನ್ನ ಮದುವೆಗೆ ಅಣ್ಣಾವ್ರು ಬರಬೇಕೆಂದು ಆಸೆ
ಪಟ್ಟು ಆಹ್ವಾನ ಪತ್ರಿಕೆಯನ್ನು ನೀಡಿದರಂತೆ. ಅವರು ಬರದೆ ನಾನು ತಾಳಿನೇ ಕಟ್ಟೊಲ್ಲ ಎಂದು ಹಠ ಹಿಡಿದು ಕುಳಿತು ಬಿಟ್ಟಿದ್ದರಂತೆ. ಕಡೆಗೆ ಸ್ನೇಹಿತರೆಲ್ಲ ಹೋಗಿ ಅಣ್ಣಾವ್ರನ್ನು
ಕರೆದು ಕೊಂಡು ಬಂದ ಮೇಲೆಯೆ ಪ್ರವೀಣ್ ತಾಳಿ ಕಟ್ಟಿದರಂತೆ.
55 ಹೋಗುವ ವಯಸ್ಸಲ್ಲ.ಆದರೆ ರಾ. ಪ್ರವೀಣ್ ತನ್ನ
ಕೆಲಸ ಮುಗಿಯಿತು ಎಂಬಂತೆ ಹೊರಟೇ ಬಿಟ್ಟಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಸಹಿಸುವ ಶಕ್ತಿಯ ನ್ನು ದೇವರು ಅವರ ಕುಟುಂಬಕ್ಕೆ ನೀಡಲಿ.