ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ: ನಾಗಣ್ಣಗೌಡ
- TV10 Kannada Exclusive
- December 1, 2023
- No Comment
- 115
ಮಂಡ್ಯ,ಡಿ, 01:-ಹೆಣ್ಣು ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದ್ದು, ಈ ರೀತಿಯ ಕೃತ್ಯಗಳಿಗೆ ಅವಕಾಶ ನೀಡಬಾರದು. ಕಾನೂನಿನ ಮೂಲಕ ಅಗತ್ಯ ಕ್ರಮ ತೆಗೆದುಕೊಂಡು ಈ ರೀತಿಯ ಕೃತ್ಯಗಳನ್ನು ತಡೆಯುತ್ತೇವೆ ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ರಾಜ್ಯಾಧ್ಯಾಕ್ಷರಾದ ನಾಗಣ್ಣಗೌಡ ಅವರು ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಸಂಬಂಧಪಟ್ಟಂತೆ ತುರ್ತು ಸಭೆ ನಡೆಸಿ ಮಾತನಾಡಿದರು.
21ನೇ ಶತಮಾನದಲ್ಲೂ ಕೂಡ ಇಂತಹ ಭ್ರೂಣ ಹತ್ಯೆ ನಡೆಯುತ್ತಿರುವುದು, ಲಿಂಗ ತಾರತಮ್ಯ ಸರಿಯಲ್ಲ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಅವಕಾಶ ನೀಡಬಾರದು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಭ್ರೂಣ ಹತ್ಯೆ ಸಂಬಂಧಪಟ್ಟಂತೆ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಮಿತಿ ರಚಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಈ ಸಮಿತಿಯನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಯೋಚಿಸಲಾಗುವುದು ಎಂದರು.
ಭ್ರೂಣ ಹತ್ಯೆ ಚಟುವಟಿಕೆಗಳು ಎಲ್ಲೂ ನಡೆಯಬಾರದು. ಅನಧಿಕೃತ ನರ್ಸಿಂಗ್ ಹೋಮ್, ಡಯಗ್ನೋಸಾಟಿಕ್ ಸೆಂಟರ್ ಗಳಲ್ಲಿ ಇಂತಹ ಕೃತ್ಯ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಇನ್ನೂ ಮುಂದೆ ಈ ರೀತಿಯ ಘಟನೆ ನಡೆಯದಂತೆ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸಿ. ಜೊತೆಗೆ ಸ್ಥಳೀಯ ಗುಪ್ತಚರ ಇಲಾಖೆಯೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮೀಣ ಮಟ್ಟದಲ್ಲಿ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕಾರ್ತೆ, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಅಧಿಕಾರಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಿಂಗಳಿಗೊಮ್ಮೆ ಗರ್ಭಿಣಿಯರ ಸಭೆ ನಡೆಸಿ ಎಂದರು.
ಜಿಲ್ಲೆಯ ಗರ್ಭಿಣಿ ಮಹಿಳೆಯರ ಪಟ್ಟಿ ತಯಾರಿಸಿ.
ಪ್ರತಿ ಗ್ರಾಮಗಳಲ್ಲಿ ಗರ್ಭಿಣಿಯರ ಮೇಲೆ ನಿಗಾ ವಹಿಸಿ, ಅವರ ಚಲನ ವಲನ ಮೇಲೆ ಗಮನ ಹರಿಸಿ. ಮಹಿಳೆಯರಿಗೆ ಭ್ರೂಣ ಹತ್ಯೆಯ ದುಷ್ಪರಿಣಾಮ, ಕಾನೂನು ಹಾಗೂ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹದ ಪ್ರಕರಣ ಹೆಚ್ಚಿದೆ. ಬಾಲ್ಯವಿವಾಹವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಕೆಲಸ ನಿರ್ವಹಿಸಿ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಾಲ್ಯವಿವಾಹದ ಬಗ್ಗೆ ಯಾರು ಬೇಕಾದರು ಎಫ್.ಐ.ಆರ್ ದಾಖಲಿಸಬಹುದು. ಬಾಲ್ಯವಿವಾಹ ಸಾಬೀತಾದರೆ ಶಿಕ್ಷೆಯಿಂದ
ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಡಿವೈಎಸ್ಪಿ ಶಿವಮೂರ್ತಿ, ತಹಶೀಲ್ದಾರ್ ಡಾ.ಶಿವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.