ನಿರ್ವಹಣೆ ಇಲ್ಲದೆ ಸೊರಗಿದ ಇ-ಟಾಯ್ಲೆಟ್…ಸಾರ್ವಜನಿಕರ ತೆರಿಗೆ ಹಣ ಪೋಲು…ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸಂಪ್…
- TV10 Kannada Exclusive
- December 31, 2023
- No Comment
- 156

ಮೈಸೂರು,ಡಿ31,Tv10 ಕನ್ನಡ

ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಲಾದ ಇ-ಟಾಯ್ಲೆಟ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.ರಾಮಕೃಷ್ಣನಗರದ ಉಪನೊಂದಣಿ ಕಚೇರಿ ಮುಂಭಾಗ ಇರುವ ಇ-ಶೌಚಾಲಯದ ದುಃಸ್ಥತಿಯನ್ನ ಕೇಳುವವರೇ ಇಲ್ಲದಂತಾಗಿದೆ.ಸಬ್ ರಿಜಿಸ್ಟ್ರಾರ್ ಕಚೇರಿ ಮಾತ್ರವಲ್ಲದೆ ಈ ಸ್ಥಳದಲ್ಲಿ ಹಲವು ಸರ್ಕಾರಿ ಕಚೇರಿಗಳಿವೆ.ಇಲ್ಲಿಗೆ ಬರುವ ಸಾರ್ವಜನಿಕರ ಬಳಕೆಗಾಗಿ ಇ-ಶೌಚಾಲಯ ನಿರ್ಮಿಸಲಾಗಿದೆ.ಆದರೆ ಇ-ಟಾಯ್ಲೆಟ್ ಕೆಟ್ಟು ನಿಂತು ತಿಂಗಳುಗಳೇ ಉರುಳಿದೆ.ಬಾಗಿಲುಗಳು ಭದ್ರವಾಗಿಲ್ಲದೆ ತೆರೆದ ಮನೆಯಂತಾಗಿದೆ.ಸಮರ್ಪಕವಾಗಿ ಬಳಕೆಯಲ್ಲಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಚಾಲ್ತಿಯಲ್ಲಿದೆ.ವಿದ್ಯುತ್ ಉಪಕರಣಗಳನ್ನ ಅಳವಡಿಸಿರುವ ಪೆಟ್ಟಿಗೆ ಓಪನ್ ಆಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಇ-ಶೌಚಾಲಯ ಬಳಕೆಯಲ್ಲಿ ಇಲ್ಲದ ಕಾರಣ ಸಾರ್ವಜನಿಕರ ಇದರ ಬಾಗಿಲ ಮುಂಭಾಗವೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.ಇದಕ್ಕೆ ನೀರು ಸರಬರಾಜು ಮಾಡುವ ಸಂಪ್ ಮುಚ್ಚಳ ಮಾಯವಾಗಿದೆ.ತೆರೆದ ಸಂಪ್ ಸಹ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಪಾದಚಾರಿಗಳಾಗಲಿ,ಪ್ರಾಣಿಗಳಾಗಲಿ ಆಯತಪ್ಪಿ ಬೀಳುವ ಸಂಭವವಿದೆ.ಇನ್ನು ಇದನ್ನ ಹೊಂದಿಕೊಂಡಂತಿರುವ ಉದ್ಯಾನವನದಲ್ಲಿ ಮಧ್ಯದ ಬಾಟಲಿಗಳು ರಾರಾಜಿಸುತ್ತಿವೆ.ಮುಕ್ತವಾಗಿ ಎಣ್ಣೆ ಪಾರ್ಟಿ ಮಾಡಿ ಬಾಟಲ್ ಗಳನ್ನ ಬಿಸಾಡಿ ಹೋಗಿದ್ದಾರೆ.ಸರ್ಕಾರಿ ಕಚೇರಿಗೆ ಬರುವ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಕೂಲವಾಗಬೇಕಿದ್ದ ಇ-ಟಾಯ್ಲೆಟ್ ಸ್ಥಿತಿ ಮುಜುಗರ ತರುತ್ತಿದೆ.ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿದ ಇ-ಟಾಯ್ಲೆಟ್ ಅಧಿಕಾರಿಗಳ ಬಣ್ಣ ಬಯಲು ಮಾಡುತ್ತಿದೆ.ಮಹಾನಗರ ಪಾಲಿಕೆ ವಲಯ ಕಚೇರಿ 3 ರ ವ್ಯಾಪ್ತಿಗೆ ಬರುವ ಇ-ಟಾಯ್ಲೆಟ್ ಗೆ ಕಾಯಕಲ್ಪ ದೊರೆಯುವುದೇ..? ಅಪಾಯ ಸಂಭವಿಸುವ ಮುನ್ನ ಸುಸ್ಥಿತಿಗೆ ಬರುವುದೇ…?ಇದನ್ನ ನಿರ್ಮಿಸಿದ ಉದ್ದೇಶ ಈಡೇರುವುದೇ..? ಇವೆಲ್ಲಾ ಪ್ರಶ್ನೆಗಳಿಗೆ ಪಾಲಿಕೆ ಅಧಿಕಾರಿಗಳು ಉತ್ತರ ನೀಡಬೇಕಿದೆ…