ಬದುಕಿರುವ ವ್ಯಕ್ತಿಗೆ ಮರಣಪ್ರಮಾಣ ಪತ್ರ ಸೃಷ್ಠಿ…ವಿಎ,ಆರ್ ಐ,ಶಿರಸ್ತೇದಾರ್ ಸೇರಿದಂತೆ 5 ಮಂದಿ ವಿರುದ್ದ FIR ದಾಖಲು…
- TV10 Kannada Exclusive
- May 25, 2024
- No Comment
- 1309
ನಂಜನಗೂಡು,ಮೇ25,Tv10 ಕನ್ನಡ
ಬದುಕಿರುವ ವ್ಯಕ್ತಿಗೆ ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಸೃಷ್ಟಿಸಿ ಕೋಟ್ಯಾಂತರ ಬೆಲೆ ಬಾಳುವ ಜಮೀನು ಲಪಟಾಯಿಸಿದ ವ್ಯಕ್ತಿಗಳು ಹಾಗೂ ನಕಲಿ ದಾಖಲೆ ಸೃಷ್ಟಿಸಲು ಶಾಮೀಲಾದ ರೆವಿನ್ಯೂ ಇಲಾಖೆ ಅಧಿಕಾರಿಗಳ ವಿರುದ್ದ ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಓರ್ವ ಅಧಿಕಾರಿ ವಿರುದ್ದ ಇಲಾಖೆಯಿಂದ 1-4 ವಿಚಾರಣೆ ಆದೇಶ ಹೊರಡಿಸಲಾಗಿದೆ.ಅಲ್ಲದೆ ಮರಣ ಪ್ರಮಾಣ ಪತ್ರ ನೀಡಿದ ಅಂದಿನ ವಿಎ ಹಾಗೂ ಇಂದು ಹೆಚ್.ಡಿ.ಕೋಟೆಯಲ್ಲಿ ಆರ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವನಾಥ್ ರವರನ್ನ ಪ್ರಕರಣದಲ್ಲಿ ಕೈ ಬಿಟ್ಟಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ನಂಜನಗೂಡು ತಾಲೂಕು ಕಸಬಾ ಹೋಬಳಿ ಗೀಕಳ್ಳಿ ಗ್ರಾಮದ ನಿವಾಸಿಗಳಾದ ಕೃಷ್ಣೇಗೌಡ,ಶಿವಮಲ್ಲೇಗೌಡ ಹಾಗೂ ಗೊಳೂರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗ ಮಂಜುನಾಥ್,ರಾಜಸ್ವ ನಿರೀಕ್ಷಕ ಪ್ರಕಾಶ್,ಶಿರಸ್ತೇದಾರ್ ಶ್ರೀನಾಥ್ ವಿರುದ್ದ FIR ದಾಖಲಾಗಿದೆ.ಬೆಂಗಳೂರು ನಿವಾಸಿ ನಾಗರಾಜರಾವ್ ಎಂಬುವರು ನೀಡಿದ ದೂರಿನ ಹಿನ್ನಲೆ ಬಿಳಿಗೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಾಗರಾಜರಾವ್ ಹಾಗೂ ಚಂದ್ರಶೇಖರ್ ಸಹೋದರರು.ನಾಗರಾಜರಾವ್ ಬೆಂಗಳೂರಿನಲ್ಲಿದ್ದಾರೆ.ಚಂದ್ರಶೇಖರ್ ಕೆನಡಾದಲ್ಲಿದ್ದರು.ಇವರಿಗೆ ನಂಜನಗೂಡಿನ ಗೀಕಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 444 ರಲ್ಲಿ 1 ಎಕ್ರೆ 20 ಗುಂಟೆ ಹಾಗೂ ಸರ್ವೆ ನಂ.442 ರಲ್ಲಿ 1 ಎಕ್ರೆ 20 ಗುಂಟೆ ಜಮೀನು ಪಿತ್ರಾರ್ಜಿತ ಆಸ್ತಿಯಾಗಿ ಬಂದಿದೆ.ಕೆನಡಾದಲ್ಲಿರುವ ಚಂದ್ರಶೇಖರ್ ಇದೇ ಏಪ್ರಿಲ್ 14 ರಂದು ಮೃತಪಟ್ಟಿದ್ದಾರೆ.ಸಹೋದರ ನಾಗರಾಜ ರಾವ್ ರವರು ಮೂರು ತಿಂಗಳ ಹಿಂದೆ ಕಂದಾಯ ಕಟ್ಟಲು ಇಲಾಖೆಗೆ ತೆರಳಿದ ವೇಳೆ ಶಾಖ್ ಆಗಿದೆ.ಚಂದ್ರಶೇಖರ್ ಈಗಾಗಲೇ ಮೃತಪಟ್ಟಿರುವುದಾಗಿ ಮರಣ ಪ್ರಮಾಣಪತ್ರ ಹಾಗೂ ವಂಶವೃಕ್ಷ ಸೃಷ್ಟಿಸಿ ಜಮೀನಿನ ಅಕ್ಕಪಕ್ಕದಲ್ಲಿದ್ದ ಕೃಷ್ಣೇಗೌಡ ಹಾಗೂ ಶಿವಮಲ್ಲೇಗೌಡ ತಮ್ಮ ಹೆಸರಿಗೆ ಜಮೀನನ್ನ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಕೋಟ್ಯಾಂತರ ಬೆಲೆ ಬಾಳುವ ಜಮೀನು ಲಪಟಾಯಿಸುವ ಉದ್ದೇಶದಿಂದ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿದ ಕೃಷ್ಣೇಗೌಡ,ಶಿವಮಲ್ಲೇ ಗೌಡ ಹಾಗೂ ನಕಲಿ ದಾಖಲೆ ಸೃಷ್ಟಿಸಲು ಶಾಮೀಲಾದ ಗ್ರಾಮ ಲೆಕ್ಕಿಗ ಮಂಜುನಾಥ್,ರಾಜಸ್ವ ನಿರೀಕ್ಷಕ ಜೆ.ಪ್ರಕಾಶ್ ಮತ್ತು ಶಿರಸ್ತೇದಾರ್ ಶ್ರೀನಾಥ್ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಾಗರಾಜರಾವ್ ರವರು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…