ಮೂಲಭೂತ ಸೌಕರ್ಯದಿಂದ ವಂಚತವಾದ ಆದಿವಾಸಿ ಕಾಲೋನಿ…ಅಧಿಕಾರಿಗಳಿಗೆ ಹಿಡಿ ಶಾಪ…
- MysoreTV10 Kannada Exclusive
- August 2, 2024
- No Comment
- 79
ನಂಜನಗೂಡು,ಆ2,Tv10 ಕನ್ನಡ
ಕುಡಿಯುವ ನೀರಿಲ್ಲ,ಬೀದಿ ದೀಪಗಳು ಕೆಟ್ಟುನಿಂತಿವೆ,ಕಸದ ರಾಶಿ,ಸ್ವಚ್ಛತೆ ಮಾಯ ಇದು ಬಂಡೀಪುರ ರಾಷ್ಟ್ರೀಯ
ಉದ್ಯಾನವನದ ಅಂಚಿನಲ್ಲಿರುವ ವೆಂಕಟಗಿರಿ ಕಾಲೋನಿಯ ದುಃಸ್ಥಿತಿ.ಮೂಲ ಸೌಕರ್ಯಗಳನ್ನ ಒದಗಿಸುವಂತೆ ಮಾಡಿದ ಮನವಿಗಳು
ಪ್ರಯೋಜನವಿಲ್ಲದಂತಾಗಿದೆ.ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಕಾಲೋನಿ ಜನ ಇದೀಗ ಪ್ರತಿಭಟನೆ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ.
ಇಲ್ಲಿನ ಕುಡಿಯುವ ನೀರು ಸರಬರಾಜು ಮಾಡುವ ಮೋಟರ್ ಕೆಟ್ಟು ನಿಂತು ತಿಂಗಳುಗಳು ಕಳೆದಿದೆ. ಬೀದಿ ದೀಪ ಮಾಯವಾಗಿ ಕಗ್ಗತ್ತಲು ಆವರಿಸಿದೆ.ಕಸಗಳ ರಾಶಿ ಅಧಿಕಾರಿಗಳ ಕಾರ್ಯವೈಖರಿಯನ್ನ ಹಂಗಿಸುತ್ತಿದೆ.ಸ್ವಚ್ಛತೆಗಾಗಿ ಅಧಿಕಾರಿಗಳು ಆಧ್ಯತೆ ನೀಡಿಲ್ಲ.ಹೀಗಾಗಿ ಕಾಲೋನಿಯ ಜನತೆ ಬೇಸತ್ತು ಸಂಯಮ ಕಳೆದುಕೊಳ್ಳುತ್ತಿದ್ದಾರೆ.ರಾತ್ರಿ ಆದ್ರೆ ಮನೆಯ ಬಾಗಿಲಿನಲ್ಲೇ ಕ್ರೂರ ಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ. ಸಂಜೆ 6 ಗಂಟೆ ನಂತರ ಗುಡಿಸಿಲಿನಿಂದ ಹೊರಬರಲಾಗದ ಪರಿಸ್ಥಿತಿ ಇಲ್ಲಿನ ಜನರದ್ದು. ಸಮಸ್ಯೆಗಳ ಆಗರವಾಗಿರುವ ಕಾಲೋನಿ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬಗೆಹರಿಸಬೇಕಾದ ಪಿಡಿಓ ಮತ್ತು ಸಂಬಂಧಪಟ್ಟ ಪರಿಶಿಷ್ಟ ಪಂಗಡಗಳ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ.ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ವೆಂಕಟಗಿರಿ ಕಾಲೋನಿ ಸೇರುತ್ತದೆ. ಇಲ್ಲಿ ತಲೆಮಾರುಗಳಿಂದ ನಲವತ್ತಕ್ಕೂ ಹೆಚ್ಚು ಕುಟುಂಬದ ಆದಿವಾಸಿ ಜನರು ವಾಸ ಮಾಡುತ್ತಿದ್ದಾರೆ. ನಂಜನಗೂಡು ತಾಲೂಕಿನ ಕಟ್ಟ ಕಡೆಯ ಆದಿವಾಸಿ ಕಾಲೋನಿ ಇದಾಗಿದೆ.ನೀರಿಗಾಗಿ ಮಹಿಳೆಯರು ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಎನ್ನುತ್ತಾರೆ ವೆಂಕಟಗಿರಿ ಕಾಲೋನಿಯ ಆದಿವಾಸಿ ಜನರು. ಹೆಡಿಯಾಲ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜು ಸಿಬ್ಬಂದಿಗಳು ಮತ್ತು ಮೋಟರ್ ರಿಪೇರಿ ಮಾಡುವುದಾಗಿ ಹೇಳಿ ಬಿಚ್ಚಿಕೊಂಡು ತೆರಳಿದವರು ಒಂದು ವಾರ ಕಳೆದರೂ ತಿರುಗಿ ನೋಡಿಲ್ಲ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ಗಮನಕ್ಕೆ ತಂದರು ಕಾಲೋನಿಗೆ ಭೇಟಿ ನೀಡಿ ನಮ್ಮ ಕಷ್ಟ ಕೇಳುವ ಕನಿಷ್ಠ ಸೌಜನ್ಯವಿಲ್ಲ. ಹಾಗಾದ್ರೆ ಈ ಭೂಮಿ ಮೇಲೆ ಮಾನವ ಜನ್ಮ ಪಡೆದಿರುವುದು ದೊಡ್ಡ ಅಪರಾಧವೆ ಎಂದು ಕಾಲೋನಿಯ ಮಹಿಳೆಯರು ಮಕ್ಕಳು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ವೆಂಕಟಗಿರಿ ಕಾಲೋನಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದಿದ್ದರೆ ತಾಲೂಕು ಕಚೇರಿಯ ಮುಂಭಾಗ ಕುಟುಂಬ ಸಮೇತರಾಗಿ ಪ್ರತಿಭಟನೆ ಕೈಗೊಳ್ಳುವುದಾಗಿ ನೊಂದ ಆದಿವಾಸಿ ಜನರು ಎಚ್ಚರಿಸಿದ್ದಾರೆ…