11 ವರ್ಷಗಳ ನಂತರ ಬಾಗಿಲು ತೆರೆದ ಮಾರಮ್ಮನ ದೇವಾಲಯ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಯಶಸ್ವಿ ಶಾಂತಿಸಭೆ…ಗ್ರಾಮದಲ್ಲಿ ಸಂತಸ…
- TemplesTV10 Kannada Exclusive
- December 13, 2024
- No Comment
- 308
ಮೈಸೂರು,ಡಿ13,Tv10 ಕನ್ನಡ
11 ವರ್ಷಗಳ ನಂತರ ಮುಚ್ಚಿದ ಮಾರಮ್ಮನ ದೇವಸ್ಥಾನದ ಬಾಗಿಲು ಇಂದು ತೆರೆಯಲಾಯಿತು.ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೆಗೆದು ಕೊಂಡ ತೀರ್ಮಾನದಂತೆ ಇಂದು ಬಾಗಿಲು ತೆರೆದು ವಿಶೇಷ ಪೂಜೆ ನೆರವೇರಿಸಲಾಯಿತು.
ಮೈಸೂರು ತಾಲೂಕು ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಇಂದಿನಿಂದ ಎಂದಿನಂತೆ ಪೂಜಾ ಕೈಂಕರ್ಯಗಳ ನೆರವೇರಲಿದೆ.ಸುಮಾರು 11 ವರ್ಷಗಳ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಭಂಧ ಹೇರಿದ ಹಿನ್ನಲೆಯಲ್ಲಿ ಭಾರಿ ವಿವಾದ ಉಂಟಾಗಿ ಬಾಗಿಲಿಗೆ ಬೀಗ ಹಾಕಲಾಗಿತ್ತು.ದೇವಾಲಯದ ಬಾಗಿಲು ತೆರೆಸಲು ಸಾಕಷ್ಟು ಬಾರಿ ಸಂಧಾನ ಸಭೆಗಳು ನಡೆದಿತ್ತು.ಹೀಗಿದ್ದೂ ಗ್ರಾಮದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ.ಇಂದು ತಹಸೀಲ್ದಾರ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಶಾಂತಿ ಸಭೆ ಕರೆದಿದ್ದರು.ಎಲ್ಲಾ ಕೋಮಿನ 5 ಮುಖಂಡರನ್ನ ಸಭೆಗೆ ಆಹ್ವಾನಿಸಲಾಗಿತ್ತು.ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯ ಬಾಗಿಲು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು.ಇಂದು ಎಲ್ಲಾ ಸಮುದಾಯದ ಮುಖಂಡರು ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ದೇವಾಲಯದ ಬೀಗ ತೆರೆದು ಒಳ ಪ್ರವೇಶಿಸಿ ಗ್ರಾಮದ ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಯಿತು…