
ದೇವಸ್ಥಾನದ ಪುನಶ್ಚೇತನಕ್ಕೆ ಕೈ ಜೋಡಿಸಿದ ಮುಸ್ಲಿಂ ಸಮುದಾಯ…ಶನೇಶ್ವರ ಆದಿಶಕ್ತಿ ದೇವಾಲಯ ಅಭಿವೃದ್ದಿಗಾಗಿ ಹಿಂದು ಮುಸ್ಲಿಂ ಭಾಯಿ..ಭಾಯಿ…
- TV10 Kannada Exclusive
- February 26, 2025
- No Comment
- 228

ಮೈಸೂರು,ಫೆ26,Tv10 ಕನ್ನಡ




ಒಂದೆಡೆ ಧಾರ್ಮಿಕ ಭಾವನೆಗಳಿಗೆ ಕೆಡುಕು ಮಾಡುವಂತೆ ಕಿಡಿಗೇಡಿಗಳು ಪ್ರಚೋದಿಸುತ್ತಿದ್ದರೆ ಮೈಸೂರಿನ ರಾಘವೇಂದ್ರ ಬಡಾವಣೆಯಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಮುಸ್ಲಿಂ ಸಮುದಾಯದ ಮುಖಂಡರು ಕೈಜೋಡಿಸಿ ಭಾವೈಕ್ಯತೆ ಮೆರೆದಿದ್ದಾರೆ.ಶಿಥಿಲಗೊಂಡಿದ್ದ ದೇವಸ್ಥಾನಕ್ಕೆ ಪುನಶ್ವೇತನ ನೀಡಲು ಹಿಂದು ಮುಸ್ಲಿಂ ಸಮುದಾಯದ ಮುಖಂಡರು ಒಂದಾಗಿ ವಿಶೇಷ ರೂಪ ನೀಡಿದ್ದಾರೆ.ಎರಡು ಸಮುದಾಯದ ಒಗ್ಗಟ್ಟಿನಿಂದ ಅಭಿವೃದ್ದಿಯಾದ ಶನೇಶ್ವರ ಆದಿಶಕ್ತಿ ದೇವಾಲಯ ಇಂದು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಾ ಭಕ್ತರನ್ನ ಆಕರ್ಷಿಸುತ್ತಿದೆ.
ರಾಘವೇಂದ್ರ ಬಡಾವಣೆ 10 ನೇ ಕ್ರಾಸ್ ನಲ್ಲಿ ಸುಮಾರು 25 ವರ್ಷಗಳ ಹಿಂದೆ ಗುಡ್ಡಪ್ಪ ಸುಂದರಸ್ವಾಮಿ ರವರು ಜಾಗ ಖರೀದಿಸಿ ಶನೇಶ್ವರ ಆದಿಶಕ್ತಿ ದೇವಾಲಯ ನಿರ್ಮಾಣ ಮಾಡಿದ್ದರು.ಶಿವರಾತ್ರಿ ಹಾಗೂ ಸಂಕ್ರಾಂತಿ ಹಬ್ಬಗಳಂದು ಈ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ ಹಾಗೂ ಭಕ್ತರನ್ನ ಸೂಜಿಗಲ್ಲಿನಂತೆ ಸೆಳೆಯುತ್ತದೆ.ಇತ್ತೀಚಿನ ದಿನಗಳಲ್ಲಿ ದೇವಾಲಯ ಬಣ್ಣ ಕಾಣದೆ ಮಂಕಾಗಿತ್ತು.ಗೋಡೆಗಳು ಶಿಥಿಲಗೊಂಡಿದ್ದವು.ದೇವಾಲಯದ ಅಭಿವೃದ್ದಿಗೆ ಸ್ಥಳೀಯ ಮುಖಂಡರಾದ ಫೈರೋಜ್ ಖಾನ್ ಹಾಗೂ ಪದ್ಮನಾಭ ರವರು ಮುಂದೆ ಬಂದರು.ಸ್ಥಳೀಯ ಹಿಂದು ಹಾಗೂ ಮುಸ್ಲಿಂ ಮುಖಂಡರ ನೆರವಿನಿಂದ ದೇವಾಲಯಕ್ಕೆ ವಿಶೇಷ ರೂಪ ನೀಡಿದ್ದಾರೆ.ಸಾಕಷ್ಟು ಮೆರುಗನ್ನ ತಂದಿದ್ದಾರೆ.ಸುಮಾರು ಒಂದು ತಿಂಗಳಿನಿಂದ ಕಾಮಗಾರಿ ನಡೆದಿದೆ.ಇದೀಗ ಶನೇಶ್ವರ ಆದಿಶಕ್ತಿ ದೇವಾಲಯ ಕಂಗೊಳಿಸುತ್ತಿದೆ.ದೇವಾಲಯದ ಕಟ್ಟಡದ ಮೇಲೆ ಗೋಪುರ ನಿರ್ಮಿಸಲಾಗಿದೆ.ಗೋಪುರದಲ್ಲಿ ಸ್ಥಾಪಿಸಲು ವಿಗ್ರಹಗಳೂ ಸಿದ್ದವಾಗಿವೆ.ಅಭಿವೃದ್ದಿಯಾದ ದೇವಾಲಯದಲ್ಲಿ ಶಿವರಾತ್ರಿ ದಿನವಾದ ಇಂದು ವಿಶೇಷ ಪೂಜೆಗಳು ನೆರವೇರಿದೆ.ಭಕ್ತರ ದಂಡು ಸಹ ಹರಿದುಬಂದಿದೆ.ದೇವಾಲಯದ ಅಭಿವೃದ್ದಿಗೆ ಹಿಂದು ಸಮುದಾಯದ ಜೊತೆ ಕೈಜೋಡಿಸಿದ ಮುಸ್ಲಿಂ ಜನಾಂಗದ ಮುಖಂಡರ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.ಯುಗಾದಿ ಹಬ್ಬದ ಸಮೀಪದ ಶುಭಗಳಿಗೆಯಂದು ಶನೇಶ್ವರ ಹಾಗೂ ಆದಿಶಕ್ತಿ ವಿಗ್ರಹಗಳನ್ನ ಸ್ಥಾಪಿತವಾದ ಗೋಪುರ ಉದ್ಘಾಟನೆಯಾಗಲಿದೆ.ಹಿಂದು ಮುಸ್ಲಿಂ ಸಮುದಾಯದ ಮುಖಂಡರ ಉತ್ತಮ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ…