
ನಾಲೆ ಮಣ್ಣು ಕೊಳ್ಳೆ ಹೊಡೆಯುತ್ತಿರುವ ಖಾಸಗಿ ವ್ಯಕ್ತಿಗಳು…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…ಬೆಳಕಿಗೆ ತಂದ ಸಂಘಟಕರು…
- TV10 Kannada Exclusive
- March 14, 2025
- No Comment
- 132


ನಂಜನಗೂಡು,ಮಾ14,Tv10 ಕನ್ನಡ
ಕಬಿನಿ ಬಲದಂಡೆ ನಾಲೆ ಮಣ್ಣನ್ನ ಖಾಸಗಿ ವ್ಯಕ್ತಿಗಳು ರಾಜಾರೋಷವಾಗಿ ಕೊಳ್ಳೆ ಹೊಡೆಯುತ್ತಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಾಣಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಕರ್ನಾಟಕ ಅಂಬೇಡ್ಕರ್ ಸೇನೆಯ ಮುಖ್ಯಸ್ಥರು ಅಕ್ರಮವನ್ನ ಬಯಲಿಗೆ ಎಳೆದಿದ್ದಾರೆ.ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ದಾಳಿ ನಡೆಸಿ ಅಕ್ರಮ ಸಾಗಾಣಿಕೆಗೆ ಬ್ರೇಕ್ ಹಾಕಿದ್ದಾರೆ.
ನಂಜನಗೂಡು ತಾಲೂಕಿನ ಚಿನ್ನದಗುಡಿ ಗ್ರಾಮದ ಬಳಿ ಹಾದುಹೋಗಿರುವ ಕಬಿನಿ ಬಲದಂಡೆ ನಾಲೆಯಲ್ಲಿ ನೀರಾವರಿ ಇಲಾಖೆಯಿಂದ ಅನುಮತಿ ಪಡೆಯದೆ ರಾಜಾರೋಷವಾಗಿ ಹಾಡುಹಗಲೇ ಮಣ್ಣನ್ನ ಬಗೆದು ಸಾಗಿಸುತ್ತಿದ್ದಾರೆ.ಈ ಮಾಹಿತಿ ಅರಿತ ಕರ್ನಾಟಕ ಅಂಬೇಡ್ಕರ್ ಸೇನೆ ಮುಖ್ಯಸ್ಥರಾದ ಬಸವಟ್ಟಿಗೆ ನಾಗೇಂದ್ರ ಹಾಗೂ ಮುಳ್ಳೂರು ಸ್ವಾಮಿ ರವರು ಕಾವೇರಿ ನೀರಾವರಿ ಇಲಾಖೆಗೆ ಮಾಹಿತಿ ನೀಡಿ ಅಧಿಕಾರಿಗಳ ಸಮೇತ ದಾಳಿ ನಡೆಸಿದ್ದಾರೆ.ರಸ್ತೆ ನಿರ್ಮಾಣಕ್ಕೆ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.ಮಣ್ಣು ಸಾಗಾಟಕ್ಕೆ ಬಳಸಲಾದ ವಾಹನಗಳನ್ನ ಸೀಜ್ ಮಾಡಿ ಕವಲಂದೆ ಪೊಲೀಸರ ವಶಕ್ಕೆ ನೀಡಿದ್ದಾರೆ.ಈ ಸಂಭಂಧ ಹಿರಿಯ ಅಧಿಕಾರಿಗಳು ನಂಜನಗೂಡು ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.ಹೀಗಿದ್ದೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದಾಗಿ ಸಂಘಟಕರು ಆರೋಪಿಸಿದ್ದಾರೆ.ಕೂಡಲೇ ದಂಧೆಕೋರರ ಅಕ್ರಮಕ್ಕೆ ಬ್ರೇಕ್ ಹಾಕದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾದೀತು ಎಂದು ಎಚ್ಚರಿಸಿದ್ದಾರೆ…