ಕಂಪ್ಯೂಟರ್ ಟೀಚರ್ ಗೆ ಲಕ್ಷಾಂತರ ಹಣ ಉಂಡೆನಾಮ ಹಾಕಿದ ಸ್ಟೂಡೆಂಟ್…ನಕಲಿ ದಾಖಲೆಗಳನ್ನ ಸೃಷ್ಟಿಸಿ ಮನಿಲಾಂಡರಿಂಗ್ ಮಾಡಿದ ಆರೋಪ…ದಂಪತಿ ವಿರುದ್ದ ಮೊಕದ್ದಮೆ ದಾಖಲಿಸಿದ ಟೀಚರ್…
- TV10 Kannada Exclusive
- September 12, 2025
- No Comment
- 196
ಮೈಸೂರು,ಸೆ12,Tv10 ಕನ್ನಡ
ಕಂಪ್ಯೂಟರ್ ಟೀಚರ್ ಗೆ ಸ್ಟೂಡೆಂಟ್ ಲಕ್ಷಾಂತರ ಹಣ ಹಾಗೂ ಚಿನ್ನಾಭರಣ ವಂಚಿಸಿದ ಪ್ರಕರಣವೊಂದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ವಂಚನೆಗೆ ಒಳಗಾದ ಟೀಚರ್ ಸ್ಟೂಡೆಂಟ್ ಹಾಗೂ ಆತನ ಪತ್ನಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಲಕ್ಷಾಂತರ ಹಣ ಕಳೆದುಕೊಂಡ ಟೀಚರ್ ಸ್ಟೂಡೆಂಟ್ ನ ನಯವಾದ ಮಾತುಗಳನ್ನ ನಂಬಿ ಚಿನ್ನಾಭರಣಗಳನ್ನೂ ಸಹ ಕಳೆದುಕೊಂಡಿದ್ದಾರೆ.
ಮೈಸೂರಿನ ರೈಲ್ವೆ ಬಡಾವಣೆ ನಿವಾಸಿ ಪ್ರೀತಾ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡವರು.ಬೋಗಾದಿಯ ವಿಜಯ್ ವಾಸುದೇವನ್ ಹಾಗೂ ಪತ್ನಿ ಜೆನೆಟ್ ಜನ್ನೀಫರ್ ವಂಚನೆ ಆರೋಪ ಹೊತ್ತವರು.ಪ್ರಸ್ತುತ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿಯಾಗಿರುವ ಪ್ರೀತಾ 2005 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಎಸ್.ಎಸ್.ಐ.ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿದ್ದರು.ಪ್ರೀತಾ ರವರ ಪತಿ ಮುರಳಿ ಕೃಷ್ಣನ್ ರವರು ನಿಧನರಾದರು.ಕೆಲವು ವರ್ಷಗಳ ಹಿಂದೆ ವಿಜಯ್ ವಾಸುದೇವನ್ ರವರು ಪ್ರೀತಾರನ್ನ ಪರಿಚಯಿಸಿಕೊಂಡು ನಿಮ್ಮ ಬಳಿ ನಾನು ಕಂಪ್ಯೂಟರ್ ತರಬೇತಿ ಪಡೆದಿದ್ದೇನೆ ನಿಮ್ಮ ಸ್ಟೂಡೆಂಟ್ ಎಂದು ಹೇಳಿದ್ದರು.ಪರಿಚಯವಾದ ನಂತರ ಪ್ರೀತಾರನ್ನ ಮನೆಗೆ ಆಹ್ವಾನಿಸಿದ ವಿಜಯ್ ವಾಸುದೇವ್ ಪತ್ನಿ ಜೆನೆಟ್ ಜನ್ನೀಫರ್ ರನ್ನ ಪರಿಚಯಿಸಿದರು.ಆಗಾಗ ಮನೆಗೆ ಬಂದು ಮಕ್ಕಳಿಗೆ ತಿಂಡಿ ಬಟ್ಟೆ ಕೊಡಿಸುವುದು,ಕಾರ್ ನಲ್ಲಿ ಓಡಾಡಿಸುವುದು ಸೇರಿದಂತೆ ಐಷಾರಾಮಿ ಜೀವನದ ರುಚಿ ತೋರಿಸಿದರು.ತಾನು ಸ್ಪಾಟ್ 01 ಎಂಬ ಕಂಪನಿ ನಡೆಸುತ್ತಿದ್ದು ಇದರಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆಂದು ವಾಸುದೇವನ್ ನಂಬಿಸಿದರು.ಪ್ರೀತಾ ರವರ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಪಾಸ್ ವರ್ಡ್ ಗಳನ್ನ ಬದಲಾಯಿಸಿಕೊಂಡು ತಾವೇ ನಿರ್ವಹಣೆ ಮಾಡುವ ಹಂತ ತಲುಪಿದರು.ಪ್ರೀತಾ ರವರ ಸಂಪೂರ್ಣ ಮಾಹಿತಿ ಪಡೆದುಕೊಂಡ ವಿಜಯ್ ವಾಸುದೇವ್ ಹಲವಾರು ಫೈನಾನ್ಸ್ ಗಳಲ್ಲಿ ಲಕ್ಷ ಲಕ್ಷ ಹಣ ಸಾಲ ಪಡೆದರು.ಎಲ್ಲವೂ ಪ್ರೀತಾ ರವರ ಖಾತೆಯಿಂದಲೇ ವಹಿವಾಟು ನಡೆಯಿತು.ಅತಿಯಾದ ನಂಬಿಕೆ ಹುಟ್ಟಿಸಿದ್ದ ವಿಜಯ್ ವಾಸುದೇವನ್ ಐಡಿಎಫ್ ಸಿ,ಹೆಚ್.ಡಿ.ಎಫ್ ಸಿ,ಡಿಎಂ ಐ,ಚೋಳಮಂಡಳಮ್ ಫೈನಾನ್ಸ್ ಸೇರಿದಂತೆ ಹಲವು ಫೈನಾನ್ಸ್ ಗಳಲ್ಲಿ ಲಕ್ಷಾಂತರ ಹಣ ಸಾಲ ಕ್ರೆಡಿಟ್ ಮಾಡಿಸಿದರು.ನಂತರ ಆ ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ತಮ್ಮ ಸಂಸ್ಥೆಯಲ್ಲಿ ಹೂಡಿರುವುದಾಗಿ ನಂಬಿಸಿದರು.ನಂತರ ಪ್ರೀತಾ ರವರ ಬಳಿಯಿದ್ದ 714 ಗ್ರಾಂ ಚಿನ್ನಾಭರಣವನ್ನ ಖಾಸಗಿ ಸಂಸ್ಥೆಯಲ್ಲಿ ಗಿರವಿ ಇಡಿಸಿ 38 ಲಕ್ಷ ಹಣ ಸಹ ಪಡೆದುಕೊಂಡಿದ್ದರು.ಇದು ಸಾಲದೆಂಬಂತೆ ಪ್ರೀತಾ ರವರ ಹೆಸರಿನಲ್ಲಿದ್ದ ಎರಡು ಮನೆಗಳನ್ನ ಮಾರಿಸಿದ್ದರು.ಲಕ್ಷಾಂತರ ಹಣ ವಿಜಯ್ ವಾಸುದೇವ್ ಹಾಗೂ ಪತ್ನಿ ಜೆನೆಟ್ ಜನ್ನೀಫರ್ ಹೆಸರಿಗೆ ವರ್ಗಾವಣೆ ಆಗಿತ್ತು.ಇವೆಲ್ಲವನ್ನೂ ತಮ್ಮ ಸಂಸ್ಥೆಯಲ್ಲಿ ಹೂಡಿರುವುದಾಗಿ ನಂಬಿಸಿದ್ದರು.ಒಂದು ದಿನ ಲಾಭದ ಹಣ ನೀಡುವಂತೆ ಕೇಳಿದಾಗ ದಂಪತಿ ಉಲ್ಟಾ ಹೊಡೆದಿದ್ದಾರೆ.ಬೆಂಗಳೂರಿನಲ್ಲಿ ಮನೆ ಖರೀದಿಸಿರುವುದಾಗಿ ತಿಳಿಸಿ ಆ ಮನೆಯನ್ನೂ ಸಹ ಮಾರಾಟ ಮಾಡಿಸಿದ್ದಾರೆ.ಇವೆಲ್ಲಾ ವಹಿವಾಟುಗಳ ಮಧ್ಯೆ ಪ್ರೀತಾರವರು 50 ಲಕ್ಷಕ್ಕೂ ಅಧಿಕ ಮೊತ್ತ ಕಳೆದುಕೊಂಡಿದ್ದಾರೆ.ಅಲ್ಲದೆ 38 ಲಕ್ಷ ಮೌಲ್ಯದ ಚಿನ್ನಾಭರಣ ಸಹ ಕೈತಪ್ಪಿಹೋಗಿದೆ.ಹಣದ ವಿಚಾರ ತೆಗೆದಾಗ ದಂಪತಿ ಕೊಲೆ ಬೆದರಿಕೆ ಹಾಕಿದ್ದಾರೆ.ತನ್ನ ಹೆಸರಲ್ಲಿ ಹಲವಾರು ಸುಳ್ಳುದಾಖಲೆಗಳನ್ನ ಸೃಷ್ಟಿಸಿ ಹಲವಾರು ಫೈನಾನ್ಸ್ ಗಳಲ್ಲಿ ಸಾಲ ಪಡೆದು ವಂಚನೆ ಮಾಡಿದ್ದಾರೆ.ನನ್ನ ಖಾತೆಯಿಂದ ಮನಿಲಾಂಡರಿಂಗ್ ಮಾಡಿದ್ದಾರೆಂದು ಆರೋಪಿಸಿರುವ ಪ್ರೀತಾರವರು ತಮ್ಮ ಸ್ಟೂಡೆಂಟ್ ವಿಜಯ್ ವಾಸುದೇವ್ ಹಾಗೂ ಪತ್ನಿ ಜೆನೆಟ್ ಜೆನ್ನಿಫರ್ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ…