ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…
- CrimeTV10 Kannada Exclusive
- September 30, 2026
- No Comment
- 34

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…
ಮೈಸೂರು,ಸೆ30,Tv10 ಕನ್ನಡ
ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಪತಿ ವಿರುದ್ದ ಪತ್ನಿ ರೋಜಾ ನೀಡಿದ ದೂರಿನ ಅನ್ವಯ ಅಪಹರಣ ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಸಮಯೋಚಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿ ಅಪಹರಣಕ್ಕೆ ಒಳಗಾದ ಬಾಲಕನನ್ನ ರಕ್ಷಿಸಿದ್ದಾರೆ.ತಂದೆ ಶರತ್ ರಾಮ್ ರನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಕುವೆಂಪುನಗರ ನಿವಾಸಿ ರೋಜಾ ಮೊದಲಪತಿಗೆ ವಿಚ್ಛೇದನ ನೀಡಿ ಕೇರಳ ಮೂಲದ ಶರತ್ ರಾಮ್ ಎಂಬುವರನ್ನ 2023 ರಲ್ಲಿ ಎರಡನೇ ವಿವಾಹವಾಗಿದ್ದರು.ಮೊದಲ ಪತಿಗೆ ಜನಿಸಿದ ಮಗ ಹೇಮಂತ್ ಗೌಡ ಹಾಗೂ ರೋಜಾ ಎರಡನೇ ಪತಿ ಜೊತೆ ವಾಸವಿದ್ದರು.ರೋಜಾ ಹಾಗೂ ಶರತ್ ರಾಮ್ ನಡುವೆ ಸಾಮರಸ್ಯ ಇಲ್ಲದ ಕಾರಣ ಕೌಟುಂಬಿಕ ಕಲಹ ಇತ್ತು.ಸೆಪ್ಟೆಂಬರ್ 21 ರಂದು ಮಗ ಹೇಮಂತ್ ಗೌಡನನ್ನು ಪುಸಲಾಯಿಸಿ ಕರೆದೊಯ್ದ ಶರತ್ ರಾಮ್ ಪತ್ನಿ ರೋಜಾಗೆ ಫೋನ್ ಮಾಡಿ 55 ಲಕ್ಷ ಹಣ ಕೊಟ್ಟರೆ ನಿನ್ನ ಮಗ ಹಿಂದಿರುಗುತ್ತಾನೆ ಎಂದು ಡಿಮ್ಯಾಂಡ್ ಮಾಡಿದ್ದಾನೆ.ಪತಿಯ ವರ್ತನೆಯಿಂದ ಬೇಸತ್ತ ರೋಜಾ ಕುವೆಂಪುನಗರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ 11 ವರ್ಷದ ಬಾಲಕ ಹೇಮಂತ್ ಗೌಡನನ್ನ ರಕ್ಷಿಸಿದ್ದಾರೆ.ಮಗನನ್ನೇ ಅಪಹರಿಸಿ ಪತ್ನಿಗೆ ಹಣದ ಬೇಡಿಕೆ ಇಟ್ಟ ಪತಿರಾಯ ಇದೀಗ ಕಂಬಿ ಎಣಿಸುತ್ತಿದ್ದಾನೆ.ಒಟ್ಟಾರೆ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ…