
ಆಯ್ದ ಚಿಂದಿ ಕದ್ದ ವ್ಯಕ್ತಿ ಮಟಾಷ್…ಜೊತೆಯಲ್ಲೇ ಇದ್ದುಕೊಂಡು ಕೊಂದ ಹಂತಕ ಸೆರೆ…ಕೃತ್ಯ ನಡೆದ 24 ಗಂಟೆಯಲ್ಲಿ ಆರೋಪಿ ಅಂದರ್…ಆರೋಪಿ ಪತ್ತೆಗೆ ನೆರವಾದ ರಾತ್ರಿ ವಿಶೇಷ ಗಸ್ತಿನ ಕಾರ್ಯಾಚರಣೆ…
- CrimeMysore
- November 12, 2022
- No Comment
- 115

ಮೈಸೂರು,ನ12,Tv10 ಕನ್ನಡ
ಆಯ್ದ ಚಿಂದಿ ಕದ್ದ ವ್ಯಕ್ತಿ ಮಟಾಷ್…ಜೊತೆಯಲ್ಲೇ ಇದ್ದುಕೊಂಡು ಕೊಂದ ಹಂತಕ ಸೆರೆ…ಕೃತ್ಯ ನಡೆದ 24 ಗಂಟೆಯಲ್ಲಿ ಆರೋಪಿ ಅಂದರ್…ಆರೋಪಿ ಪತ್ತೆಗೆ ನೆರವಾದ ರಾತ್ರಿ ವಿಶೇಷ ಗಸ್ತಿನ ಕಾರ್ಯಾಚರಣೆ…
ರಸ್ತೆ ಬದಿಯಲ್ಲಿ ಆಯ್ದ ಚಿಂದಿಯನ್ನ ಕದ್ದು ಮಾರಾಟ ಮಾಡಿದ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಭೀಕರವಾಗಿ ಕೊಂದ ಆರೋಪಿ ಸೆರೆಯಾಗಿದ್ದಾನೆ.ಕೃತ್ಯ ನಡೆದ ಕೇವಲ 24 ಗಂಟೆಯಲ್ಲಿ ಹಂತಕನನ್ನ ಬಂಧಿಸುವಲ್ಲಿ ಲಷ್ಕರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ದೊರೆತ ಸಣ್ಣ ಸುಳಿವಿನ ಆಧಾರದಲ್ಲಿ ಹಂತಕನ ಹೆಡೆಮುರಿ ಕಟ್ಟಿದ್ದಾರೆ.ಟಿ.ನರಸೀಪುರ ತಾಲೂಕು ಯಡತೊರೆ ಗ್ರಾಮದ ಚೆನ್ನಜ್ಜ(42) ಕೊಲೆಯಾದ ವ್ಯಕ್ತಿ.ಪಾಂಡವಪುರದ ನಿವಾಸಿ ಸಮರ್ಥ್(23) ಸೆರೆಯಾದ ಹಂತಕ.
ನವೆಂಬರ್ 11 ರಂದು ಮೈಸೂರಿನ ಉಮಾ ಚಿತ್ರಮಂದಿರದ ಬಳಿ ಇರುವ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಅಪರಿಚಿತ ರಕ್ತಸಿಕ್ತ ಮೃತದೇಹ ಕಂಡು ಬಂದಿತ್ತು.ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಲಷ್ಕರ್ ಠಾಣೆ ಪೊಲೀಸರಿಗೆ ರಹಸ್ಯ ಭೇದಿಸುವುದು ಸವಾಲಾಗಿತ್ತು.ಕಮೀಷನರ್ ಡಾ.ಚಂದ್ರಗುಪ್ತ ಡಿಸಿಪಿ ಪ್ರದೀಪ್ ಗಂಟಿ ಹಾಗೂ ಡಿಸಿಪಿ ಗೀತಾ ಪ್ರಸನ್ನ ರವರ ಮಾರ್ಗದರ್ಶನದಲ್ಲಿ ಎಸಿಪಿ ಶಶಿಧರ್ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ರವರ ನೇತೃತ್ವದಲ್ಲಿ ತಂಡ ರಚಿಸಲಾಯಿತು.ಲಷ್ಕರ್ ಠಾಣೆಯಲ್ಲಿ ನಡೆಯುತ್ತಿರುವ ರಾತ್ರಿ ಗಸ್ತಿನ ವಿಶೇಷ ಕಾರ್ಯಾಚರಣೆ ಹಂತಕನ ಪತ್ತೆಗೆ ನೆರವಾಗಿತ್ತು.ಶಂಕಿತ ಯುವಕನೊಬ್ಬ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ ಚಿಕ್ಕಣ್ಣಸ್ವಾಮಿ ಕಣ್ಣಿಗೆ ಬಿದ್ದಿದ್ದ.ಯುವಕನ ಫೋಟೋ ಕ್ಲಿಕ್ಕಿಸಿದ್ದ ಸಿಬ್ಬಂದಿಗಳು ಠಾಣೆಯಲ್ಲಿ ದಾಖಲಿಸಿದ್ದರು.
ಫೋಟೋದಲ್ಲಿ ದೊರೆತ ಸುಳಿವು
ರಾತ್ರಿ ವೇಳೆ ಸಿಕ್ಕ ಯುವಕನ ಫೋಟೋ ಪರಿಶೀಲನೆ ನಡೆಸಿದಾಗ ಆತನ ಕಾಲಿನಲ್ಲಿ ರಕ್ತದ ಕಲೆಗಳಿದ್ದವು.ಕೂಡಲೇ ಯುವಕನ ಪತ್ತೆಗೆ ಲಷ್ಕರ್ ಠಾಣೆ ಪೊಲೀಸರು ಮುಂದಾದರು.ಟೌನ್ ಹಾಲ್ ನಲ್ಲಿ ಫೋಟೋದಲ್ಲಿದ್ದ ಚೆಹರೆಯ ವ್ಯಕ್ತಿ ಕಂಡುಬಂದಿದ್ದ.ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಓಳಪಡಿಸಿದಾಗ ಕೊಲೆಯೊಂದರ ರಹಸ್ಯ ಬಯಲಾಗಿತ್ತು.ಉಮಾ ಚಿತ್ರಮಂದಿರದ ಬಳಿ ದೊರೆತ ಅಪರಿಚಿತ ವ್ಯಕ್ತಿಯ ಕೊಲೆ ಮಾಡಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದ.
ಕೊಲೆಯಾದ ಚೆನ್ನಜ್ಜ ಹಾಗೂ ಆರೋಪಿ ಸಮರ್ಥ್ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದ ಜೋಡಿಗಳು.ಗ್ಯಾಂಗರಿನ್ ನಿಂದ ಕಾಲು ಕಳೆದುಕೊಂಡಿದ್ದ ಚೆನ್ನಜ್ಜನಿಗೆ ಸಮರ್ಥ್ ಸಹಾಯಕನಾಗಿದ್ದ.ಕೆಲ ದಿನಗಳಲ್ಲಿ ಚೆನ್ನಜ್ಜ ಹಾಗೂ ಸಮರ್ಥ್ ನಡುವೆ ಬಿರುಕು ಕಾಣಿಸಿಕೊಂಡಿತ್ತು.ಕಾರಣ ಅನಗತ್ಯವಾಗಿ ಸಮರ್ಥ್ ಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದ.ಅಲ್ಲದೆ ಸಮರ್ಥ್ ಆಯ್ದ ಚಿಂದಿಯನ್ನ ಚೆನ್ನಜ್ಜ ಕದ್ದು ಮಾರುತ್ತಿದ್ದ.ಇದರಿಂದ ಇಬ್ಬರ ನಡುವೆ ಗಲಾಟೆ ಆಗಿತ್ತು.ನವೆಂಬರ್ 10 ರ ರಾತ್ರಿ ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.ರಸ್ತೆಯಲ್ಲಿ ಬಿದ್ದಿದ್ದ ಬೀರ್ ಬಾಟೆಲ್ ನ ತಂದ ಸಮರ್ಥ್ ಚೆನ್ನಜ್ಜನ ತಲೆಗೆ ಹೊಡೆದಿದ್ದಾನೆ.ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಅಪರಿಚಿತ ವ್ಯಕ್ತಿಯ ಬಳಿ ಯಾವುದೇ ಮೊಬೈಲ್ ಇರಲಿಲ್ಲ.ಆತನ ಮಾಹಿತಿಯೂ ಇರಲಿಲ್ಲ.ಪ್ರಕರಣವನ್ನ ಸವಾಲಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಂತಕ ಪತ್ತೆಗೆ ಕಾರ್ಯತಂತ್ರ ರೂಪಿಸಿದ್ದರು.ಕೃತ್ಯ ನಡೆದು ಕೇವಲ 24 ಗಂಟೆಯಲ್ಲಿ ಮೃತನ ಮಾಹಿತಿಯನ್ನ ಕಲೆ ಹಾಕಿದ್ದಲ್ಲದೆ ರಾತ್ರಿ ವಿಶೇಷ ಕಾರ್ಯಾಚರಣೆ ನೆರವಿನಿಂದ ಆರೋಪಿಯನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಲಷ್ಕರ್ ಠಾಣೆಯ ಪಿಎಸ್ಸೈ ಗೌತಮ್,ಮಹಿಳಾ ಪಿಎಸ್ಸೈ ಧನಲಕ್ಷ್ಮಿ ಎಎಸ್ಸೈ ಸಿದ್ದರಾಜು,ಸಿಬ್ಬಂದಿಗಳಾದ ಚೇತನ್,ಚೆನ್ನಪ್ಪ,ನದಾಫ್,ಮಹದೇವಪ್ರಸಾದ್,ಲಿಂಗರಾಜು,ಮಹೇಶ್,ಶಿವರಾಜ್,ರಮೇಶ್ ರವರನ್ನೊಳಗೊಂಡ ತಂಡ ಹಂತಕನ ಪತ್ತೆ ಕಾರ್ಯಾಚರಣೆ ಯಶಸ್ವಿಗೊಳಿಸಿದೆ.ಯಾವುದೇ ತಂತ್ರಜ್ಞಾನ ಬಳಸದೆ ಆರೋಪಿಯನ್ನ ಕೇವಲ 24 ಗಂಟೆಯಲ್ಲಿ ಸೆರೆಹಿಡಿಯಲಾಗಿದೆ. ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ರವರು ಲಷ್ಕರ್ ಠಾಣೆ ಸಿಬ್ಬಂದಿಗಳನ್ನ ಪ್ರಶಂಸಿಸಿದ್ದಾರೆ…