
ಮಂಡ್ಯ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸೋಣ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಟಿ.ಎನ್ ಧನಂಜಯ್
- Uncategorized
- January 30, 2023
- No Comment
- 107

ಮಂಡ್ಯ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸೋಣ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಟಿ.ಎನ್ ಧನಂಜಯ್

ವ್ಯಕ್ತಿಯ ದೇಹದ ಮೇಲೆ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಒದಗಿಸಿ ಕುಷ್ಠರೋಗ ಇರುವವರನ್ನ ಗುಣಪಡಿಸಲಾಗುವುದು.
ಮಂಡ್ಯವನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸೋಣ. ಇದಕ್ಕೆ ಎಲ್ಲಾ ಇಲಾಖೆಯವರು ಕೈಜೋಡಿಸಿ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಟಿ.ಎನ್ ಧನಂಜಯ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ವಾರ್ತ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಕುಷ್ಠರೋಗ ಬಾಧಿತರ ಸಂಘ ಇವರ ಸಂಯುಕ್ತಾಶ್ರಯದಲ್ಲಿಂದು ನಡೆದ ಜಾಗೃತಿ ಜಾಥದ ಜಿಲ್ಲಾ ಮಟ್ಟದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನವರಿ 30 ರಿಂದ ಫೆಬ್ರವರಿ 13 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಕುಷ್ಠರೋಗ ಜಾಗೃತಿ ಅಭಿಯಾನ ನಡೆಯಲಿದೆ. ಕುಷ್ಠರೋಗ ಮತ್ತು ಟಿ.ಬಿ ಖಾಯಿಲೆಗಳು ಪ್ರಪಂಚದ ಅತ್ಯಂತ ಹಳೆಯ ಖಾಯಿಲೆ. ಮನುಷ್ಯ ನಗರೀಕರಣದ ಹಂತ ತಲುಪಿದಾಗ ಮೊದಲು ತಿಳಿದ ಕಾಯಿಲೆಯೇ ಕುಷ್ಠರೋಗ. ಇದರ ವಿರುದ್ಧ ಹೋರಾಡಿ ಕುಷ್ಠರೋಗ ಇತ್ತು ಅನ್ನೊದನ್ನ ನಾವು ಇತಿಹಾಸವನ್ನಾಗಿ ಮಾಡಬೇಕಿದೆ ಎಂದರು.
ಕುಷ್ಠರೋಗಿಗಳು ಕೂಡ ಮನುಷ್ಯರು, ಅವರಲ್ಲಿ ಬೇಧಬಾವ ಬೇಡ ಎಂದು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮಗಾಂಧಿಜೀ ಅವರು ಹೇಳಿ, ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಿದರು. ಅವರ ಸೇವೆಯನ್ನು ಪರಿಗಣಿಸಿ ಅವರು ಹುತಾತ್ಮರಾದ ದಿನವನ್ನು ರಾಷ್ಟ್ರೀಯ ಕುಷ್ಠರೋಗ ದಿನ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕುಷ್ಠರೋಗ ಸಂಪೂರ್ಣ ಗುಣಮುಖ ಹೊಂದುವ ಖಾಯಿಲೆ.ಯಾರಲ್ಲಾದರೂ ಅನುಮಾನಸ್ಪಾದ ಮಚ್ಚೆ ಇದ್ದಲ್ಲಿ ಅವರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸುತ್ತೇವೆ. ಪ್ರಾರಂಭಿಕ ಅಂತದಲ್ಲೆ ನಾವು ಇದರ ವಿರುದ್ಧ ಹೋರಾಡಬೇಕು ಇಲ್ಲ ಎಂದರೆ ಇತರರಿಗೆ ಹರಡುತ್ತದೆ ಎಂದರು
ಕಳೆದ ವರ್ಷಗಳಲ್ಲಿ ಮಂಡ್ಯದಲ್ಲಿ 21 ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರೆಲ್ಲರಿಗೂ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದೇವೆ. ಕುಷ್ಠರೋಗವನ್ನು ಬೇಗ ಪತ್ತೆ ಹಚ್ಚಿದರೇ ಅಂಗವಿಕಲರಾಗುವುದನ್ನು ತಡೆಗಟ್ಟಬಹುದು ಎಂದರು.
ಮಂಡ್ಯ ಜಿಲ್ಲೆಯಲ್ಲಿ 15 ದಿನಗಳ ಕಾಲ ಕುಷ್ಠರೋಗ ನಿರ್ಮೂಲನಾ ಜಾಗೃತಿ ಅಭಿಯಾನ ನಡೆಯಲಿದೆ. ಕುಷ್ಠರೋಗದ ಚಿಹ್ನೆ ಇರುವ ಪ್ರತಿಯೊಬ್ಬ ನಾಗರಿಕರನ್ನು ದೈಹಿಕ ತಪಾಸಣೆ ಮಾಡಿ ಕುಷ್ಠರೋಗದಿಂದ ಬಳಲುತ್ತಿರುವುದನ್ನ ತಪ್ಪಿಸಬೇಕಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಪಿ ಅಶ್ವಥ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುತ್ತೇವೆ ಎಂದು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರತಿಜ್ಞಾ ಬೋಧನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಎಂ.ಡಿ, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ.ಭವಾನಿಶಂಕರ್ ಕೆ.ಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೆಶಕ ನಾಗರಾಜು ಆರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಟಿ.ಎಸ್ ಜವರೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಕೆ, ಜಿಲ್ಲಾ ಕುಷ್ಠರೋಗ ಭಾದಿತರ ಸಂಘದ ಅಧ್ಯಕ್ಷ ಬಸವರಾಜು, ಸೇರಿದಂತೆ ಇನ್ನಿತರರು ಹಾಜರಿದ್ದರು.