ಲಕ್ಷಾಂತರ ಗುತ್ತಿಗೆ ಹಣ ಬಾಕಿ ಇದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಗುತ್ತಿಗೆ ಕರಾರು ವಿಸ್ತರಣೆ…ಮುಡಾ ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶನ…ಪ್ರಭಾವಕ್ಕೆ ಮಣಿದರಾ ಆಫೀಸರ್ಸ್…?
- TV10 Kannada Exclusive
- November 15, 2023
- No Comment
- 945
ಮೈಸೂರು,ನ15,Tv10 ಕನ್ನಡ
ಮುಡಾ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಎಷ್ಟು ಬರೆದರೂ ಡೋಂಟ್ ಕೇರ್ ಅನ್ನೋ ಹಾಗೇ ಕಾಣ್ತಿದೆ.ಅಕ್ರಮಗಳನ್ನ ಬಯಲಿಗೆ ಎಳೆದಷ್ಟೂ ಮತ್ತಷ್ಟು ಅಕ್ರಮಗಳಲ್ಲಿ ಭಾಗಿಯಾಗುತ್ತಲೇ ಬರುತ್ತಿದ್ದಾರೆ.ಹೆಬ್ಬಾಳ್ ಬಡಾವಣೆ ಮುಖ್ಯರಸ್ತೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ನ ಗುತ್ತಿಗೆದಾರನಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಶಾಮೀಲಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಗುತ್ತಿಗೆದಾರನಿಂದ ಲಕ್ಷಾಂತರ ಗುತ್ತಿಗೆ ಹಣ ಬಾಕಿ ಇದ್ದರೂ ವಸೂಲಿ ಮಾಡದೆ ಕರಾರನ್ನ ಮತ್ತೆರಡು ವರ್ಷಕ್ಕೆ ನವೀಕರಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣದಲ್ಲಿ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಮಾಹಿತಿ ಹಕ್ಕಿನ ಮೂಲಕ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ.
ಮೈಸೂರಿನ ಹೆಬ್ಬಾಳ್ ಬಡಾವಣೆಯ ಮುಖ್ಯರಸ್ತೆಯಲ್ಲಿ 2017 ರಲ್ಲಿ 5 ಕೋಟಿ ವೆಚ್ಚದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಭವ್ಯ ಕಲ್ಯಾಣ ಮಂಟಪ ನಿರ್ಮಿಸಿದೆ.2019-20 ನೇ ಸಾಲಿನಿಂದ ವಾರ್ಷಿಕ 35 ಲಕ್ಷದಂತೆ ಬೆಂಗಳೂರಿನ ಸರ್ಕಾರ್ ಕನ್ಸ್ಟ್ರಕ್ಷನ್ ಮಾಲೀಕರಾದ ಸಿದ್ದರಾಜಪ್ಪ ಎಂಬುವರಿಗೆ 5 ವರ್ಷಕ್ಕೆ ಗುತ್ತಿಗೆ ನೀಡಿದೆ.2020-21 ಹಾಗೂ 2021-22 ನೇ ಸಾಲಿನಲ್ಲಿ ಕೊರೊನಾ ಇದ್ದ ಕಾರಣ ಗುತ್ತಿಗೆ ಹಣವನ್ನ ಮನ್ನಾ ಮಾಡಲಾಗಿದೆ.ಇದರ ಹೊರತು ಪಡಿಸಿ ಉಳಿದ ಅವಧಿಯ ಗುತ್ತಿಗೆ ಹಣ ಪಾವತಿ ಇದುವರೆಗೆ ಆಗಿರುವುದಿಲ್ಲ.ಕರೊನಾದ ಎರಡು ವರ್ಷಗಳ ಗುತ್ತಿಗೆ ಹಣ ಪಾವತಿ ಹೊರತು ಪಡಿಸಿ ಉಳಿದ ಅವಧಿಗೆ ಬಡ್ಡಿ ಸೇರಿದಂತೆ 55 ಲಕ್ಷ ರೂ ಬಾಕಿ ಪಾವತಿಸಬೇಕಿದೆ.ಸದರಿ ಕನ್ವೆನ್ಷನ್ ಹಾಲ್ ನಲ್ಲಿ ಒಂದು ಮದುವೆಗೆ ಸುಮಾರು 1.5 ಲಕ್ಷ ವಸೂಲಿ ಮಾಡಲಾಗುತ್ತಿದೆ.ಮದುವೆ ಸಮಾರಂಭ ಇಲ್ಲದಿದ್ದಾಗ ಬಟ್ಟೆ ಹಾಗೂ ಪೀಠೋಪಕರಣಗಳ ವಸ್ತಪ್ರದರ್ಶನಕ್ಕೆ ಅನುಮತಿ ನೀಡಿ ಬಾಡಿಗೆ ಪಡೆಯಲಾಗುತ್ತಿದೆ.ಹೀಗಿದ್ದರೂ ಗುತ್ತಿಗೆದಾರ ಸಿದ್ದರಾಜಪ್ಪ 55 ಲಕ್ಷ ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ.ಬಾಕಿ ಹಣ ಪಾವತಿಸುವಂತೆ ವಲಯ 4 ರ AEE ಸಂಪತ್ ಕುಮಾರ್ ನೋಟೀಸ್ ಜಾರಿಗೊಳಿಸಿದ್ದಾರೆ.55 ಲಕ್ಷ ಗುತ್ತಿಗೆ ಹಣ ಬಾಕಿ ಇದ್ದರೂ ಮತ್ತೆರಡು ವರ್ಷಕ್ಕೆ ಗುತ್ತಿಗೆ ಅವಧಿಯನ್ನ ವಿಸ್ತರಿಸಲಾಗಿದೆ.ಕನ್ವೆನ್ಷನ್ ಹಾಲ್ ನಲ್ಲಿ ನಿರಂತರವಾಗಿ ಸಮಾರಂಭಗಳು ನಡೆಯುತ್ತಿದ್ದರೂ ಗುತ್ತಿಗೆ ಹಣವನ್ನ ಪಾವತಿ ಮಾಡದ ಸಿದ್ದರಾಜಪ್ಪಗೆ ಮತ್ತೆರಡು ವರ್ಷ ನವೀಕರಿಸುವ ದರ್ದು ಮುಡಾ ಅಧಿಕಾರಿಗಳಿಗೆ ಏನಿತ್ತು..? ಎಂಬ ಪ್ರಶ್ನೆ ಉದ್ಭವವಾಗಿದೆ.ಸಿದ್ದರಾಜಪ್ಪ ಪ್ರಭಾವಿ ಶಾಸಕರೊಬ್ಬರ ಸಂಭಂಧಿಕ ಎಂದು ಹೇಳಲಾಗಿದ್ದು ಪ್ರಭಾವಕ್ಕೆ ಮುಡಾ ಅಧಿಕಾರಿಗಳು ಮಣಿದರೇ..? ಎಂಬ ಅನುಮಾನ ಎದ್ದು ಕಾಣುತ್ತಿದೆ.ಸಧ್ಯ ಈ ವಿಚಾರವನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಮಾಹಿತಿಹಕ್ಕಿನ ಮೂಲಕ ದಾಖಲೆಗಳನ್ನ ಪಡೆದಿದ್ದಾರೆ.ಇಷ್ಟೆಲ್ಲಾ ಬೆಳವಣಿಗೆಯಾಗಿದ್ದರೂ ಮುಡಾ ಅಧ್ಯಕ್ಷರೂ ಮತ್ತು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಆಗಲಿ,ಮುಡಾ ಆಯುಕ್ತ ದಿನೇಶ್ ಕುಮಾರ್ ಆಗಲಿ ಅಥವಾ ಕಾರ್ಯದರ್ಶಿಗಳಾಗಲಿ ಪ್ರಶ್ನಿಸದೆ ಮೌನವಹಿಸಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ.ಸಿದ್ದರಾಜಪ್ಪನ ಪ್ರಭಾವಕ್ಕೆ ಮಣಿದು ಮತ್ತೆರಡು ವರ್ಷಕ್ಕೆ ನವೀಕರಿಸಿದರೆ ಎಂಬ ಶಂಕೆ ಕಾಡುತ್ತಿದೆ.ಇನ್ನಾದರೂ ಮುಡಾ ಅಧಿಕಾರಿಗಳು ಎಚ್ಚೆತ್ತು ಕನ್ವೆನ್ಷನ್ ಹಾಲ್ ನಿಂದ ಬಾಕಿ ಇರುವ ಲಕ್ಷಾಂತರ ಗುತ್ತಿಗೆ ಹಣ ವಸೂಲಿ ಮಾಡುವರೇ…? ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದನನ್ನ ನಿಯಂತ್ರಿಸುವರೇ…?