ಕೊಠಡಿಗಳಿಲ್ಲದೆ ಜಗುಲಿಯಲ್ಲೇ ತರಗತಿಗಳು ನಡೆಯುವ ಸರ್ಕಾರಿ ಶಾಲೆ…ಶಿಕ್ಷಣ ಅಧಿಕಾರಿಗಳು ಭೇಟಿ…Tv10 ಇಂಪ್ಯಾಕ್ಟ್…
- TV10 Kannada Exclusive
- November 25, 2023
- No Comment
- 439

ಕೊಠಡಿಗಳಿಲ್ಲದೆ ಜಗುಲಿಯಲ್ಲೇ ತರಗತಿಗಳು ನಡೆಯುವ ಸರ್ಕಾರಿ ಶಾಲೆ…ಶಿಕ್ಷಣ ಅಧಿಕಾರಿಗಳು ಭೇಟಿ…Tv10 ಇಂಪ್ಯಾಕ್ಟ್…

ಹುಣಸೂರು,ನ25,Tv10 ಕನ್ನಡ

ಕೊಠಡಿಗಳ ಕೊರತೆಯಿಂದ ಜಗುಲಿಯಲ್ಲೇ ತರಗತಿಗಳನ್ನ ನಡೆಸುವ ಸರ್ಕಾರಿ ಶಾಲೆಯ ದುಃಸ್ಥಿತಿ ಬಗ್ಗೆ Tv10 ಕನ್ನಡ ವಾಹಿನಿ ಪ್ರಸಾರ ಮಾಡಿದ ಸುದ್ದಿಗೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.ಬಿಇಓ ಹಾಗೂ ಮಂಜುನಾಥ್ ಶಾಲೆಗೆ ಭೇಟಿ ಕೊಟ್ಟು ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆ ಕೊಟ್ಟಿದ್ದಾರೆ.ಇದು Tv10 ಕನ್ನಡ ವಾಹಿನಿ ಸುದ್ದಿಯ ಇಂಪ್ಯಾಕ್ಟ್.
ಹುಣಸೂರು ತಾಲೂಕು ಚಿಕ್ಕಹುಣಸೂರಿನ ಆಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು ಯಾವುದೇ ಸೌಕರ್ಯಗಳನ್ನ ಒದಗಿಸದ ಕಾರಣ ಮಕ್ಕಳ ಶೈಕ್ಷಣಿಕೆ ಪ್ರಗತಿಗೆ ಧಕ್ಕೆಯಾಗುತ್ತಿದೆ.ಇಲ್ಲಿ ಒಂದರಿಂದ ಏಳರವರೆಗೆ ತರಗತಿಗಳಿವೆ.ಒಟ್ಟು 80 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಏಳು ತರಗತಿಗಳಿಗೆ ಒಂದೇ ಒಂದು ಕೊಠಡಿ ಇದೆ.ಹೀಗಾಗಿ ಮಕ್ಕಳಿಗೆ ಶಾಲೆಯ ಹೊರ ಆವರಣದ ಜಗುಲಿಯೇ ಕೊಠಡಿಗಳಾಗಿವೆ.ರಸ್ತೆಗೆ ಸನಿಹದಲ್ಲೇ ಇರುವ ಜಗುಲಿ ಮೇಲೆ ಕುಳಿತು ಪಾಠಗಳನ್ನ ಕೇಳುವ ಪರಿಸ್ಥಿತಿ ಇಲ್ಲಿನ ಮಕ್ಕಳದ್ದು.ಏಳು ತರಗತಿಗಳು ನಡೆದರೂ ಶಿಕ್ಷಕರ ಕೊರತೆಯೂ ಕಾಡುತ್ತಿದೆ.ಇನ್ನು ಆಟದ ಮೈದಾನ ಈ ಶಾಲೆಗೆ ಮರೀಚಿಕೆ.ಶಾಲೆಯ ಮುಂಭಾಗದಲ್ಲಿ ಹರಿಯುವ ಚರಂಡಿ ನೀರು ದುರ್ನಾತ ಬೀರುತ್ತಿದೆ.ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಮಳೆ ಬಂದರಂತೂ ಶೋಚನೀಯ ಪರಿಸ್ಥಿತಿ.ಎಲ್ಲಾ ಮಕ್ಕಳನ್ನ ಒಂದೇ ಕೊಠಡಿಗೆ ಹಾಕಿ ಕೈಕಟ್ಟಿ ಕೂರುವ ದುಃಸ್ಥಿತಿ.ಸದರಿ ಶಾಲೆಗೆ 25 ಗುಂಟೆ ಜಮೀನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ 2021 ರಲ್ಲೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹುಣಸೂರು ತಹಸೀಲ್ದಾರ್ ಗೆ ಪತ್ರ ರವಾನೆಯಾಗಿದೆ.ಹೀಗಿದ್ದೂ ತಹಸೀಲ್ದಾರ್ ಕಚೇರಿಯಿಂದ ಯಾವುದೇ ಕ್ರಮ ಜರುಗಿಲ್ಲ.ಮೂಲಭೂತ ಸೌಕರ್ಯವಿಲ್ಲದೆ ಸೊರಗುತ್ತಿರುವ ಶಾಲೆಗೆ ಕನಿಷ್ಠ ಸೌಲಭ್ಯಗಳನ್ನಾದರೂ ಕಲ್ಪಿಸಬೇಕಿದೆ.ಖಾಸಗಿ ಶಾಲೆಗಳ ಪ್ರವಾಹದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆ.ಈ ಶಾಲೆಗೆ ಪ್ರವೇಶಾತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದರೂ ಸರ್ಕಾರದ ಸೌಲಭ್ಯಗಳು ಇಲ್ಲದ ಕಾರಣ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗುವ ಆತಂಕವಿದೆ.ಇನ್ನಾದರೂ ಶಿಕ್ಷಣ ಇಲಾಖೆ ಈ ಶಾಲೆಯ ಉಳಿವಿಗಾಗಿ ಮೂಲಭೂತ ಸೌಕರ್ಯ ಕಲ್ಪಿಸಲಿ ಎಂದು ಇತ್ತೀಚೆಗೆ ವರದಿ ಮಾಡಲಾಗಿತ್ತು.Tv10 ಕನ್ನಡ ವಾಹಿನಿಯ ವರದಿಗೆ ಎಚ್ಚೆತ್ತು ಬಿಇಓ ರೇವಣ್ಣ ಹಾಗೂ ತಹಸೀಲ್ದಾರ್ ಮಂಜುನಾಥ್ ರವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲೆಯ ಆಟದ ಮೈದಾನಕ್ಕೆ ಜಮೀನು ಹಾಗೂ ಕೊಠಡಿಗಳ ಕೊರತೆ ನೀಗಿಸಿ ಮೂಲಭೂತ ಸೌಕರ್ಯಗಳನ್ನ ಒದಗಿಸುವ ಭರವಸೆ ನೀಡಿದ್ದಾರೆ.ಇದು Tv10 ಕನ್ನಡ ವರದಿ ಎಫೆಕ್ಟ್…