
ಗ್ರಾ.ಪಂ.ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲು ಸರ್ಕಾರದಿಂದ ಆದೇಶ…ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡ ಮಾಲೀಕರಿಗೆ ಶಾಕ್…
- TV10 Kannada Exclusive
- May 16, 2025
- No Comment
- 715




ಮೈಸೂರು,ಮೇ16,Tv10 ಕನ್ನಡ

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯ್ತಿಗೆ ಆದೇಶ ಹೊರಡಿಸಲಾಗಿದೆ.ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ವಾಣಿಜ್ಯ,ವಸತಿ ಹಾಗೂ ಇತರೆ ಕಟ್ಟಡಗಳ ಕಾಮಗಾರಿ ಸ್ಥಗಿತಗೊಳಿಸುವುದು ಹಾಗೂ ಪೂರ್ಣಗೊಂಡ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಆದೇಶವನ್ನ ಪಾಲಿಸುವಂತೆ ಸೂಚಿಸಲಾಗಿದೆ.ಆದೇಶ ಪಾಲಿಸಲು ಕೆಲವು ಮಾರ್ಗಸೂಚಿಗಳನ್ನೂ ಸಹ ನೀಡಿದೆ.ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಬೇಕು.ಒಂದು ವೇಳೆ ಅನುಮತಿ ಪಡೆದಿದ್ದರೂ ನಿಯಮಾನುಸಾರ ಹಾಗೂ ಅನುಮೋದಿತ ನಕ್ಷೆಯಂತೆ ನಿರ್ಮಾಣವಾಗುತ್ತಿದೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.ಅನುಮತಿ ಪಡೆದ ಕಟ್ಟಡ ಕಾಮಗಾರಿ ಅನುಮೋದಿತ ನಕ್ಷೆಗಿಂತ ಭಿನ್ನವಾಗಿದ್ದರೆ ಕೂಡಲೇ ನೋಟೀಸ್ ನೀಡಿ ಸರಿಪಡಿಸುವಂತೆ ಸಲಹೆ ನೀಡಬೇಕು.ಅಲ್ಲದೆ ಸಲಹೆಯಂತೆ ನಿರ್ಮಾಣವಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ಅನಧಿಕೃತ ಕಟ್ಟಡಗಳ ನೆಲಸಮಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು.ಈ ಕಾರ್ಯಕ್ಕೆ ಸ್ಥಳೀಯ ಕಂದಾಯ ಇಲಾಖೆಗೆ ಪೊಲೀಸರು ನೆರವು ನೀಡಬೇಕು.ಹಾಗೊಂದು ವೇಳೆ ಸಹಕರಿಸದಿದ್ದಲ್ಲಿ ಸಂಭಂಧಪಟ್ಟಿ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ತಿಳಿಸಿದೆ.ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಥವಾ ಸಂಭಂಧಿಸಿದ ಯಾವುದೇ ಸಿಬ್ಬಂದಿಗಳನ್ನ ಗ್ರಾಮಾವಾರು ನಿಯೋಜಿಸಿ ಯಾವುದೇ ಲೈಸೆನ್ಸ್ ಇಲ್ಲದ ಕಟ್ಟಡ ನಿರ್ಮಾಣವಾಗುತ್ತಿಲ್ಲವೆಂದು ಧೃಢೀಕರಣ ಪಡೆಯಬೇಕು.ಲೈಸೆನ್ಸ್ ಇಲ್ಲದೆ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ವರದಿ ನೀಡಿದ ತಕ್ಷಣ ಕ್ರಮ ಕೈಗೊಳ್ಖಬೇಕು.ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ತ್ರೈಮಾಸಿಕ ತಪಾಸಣೆ ನಡೆಸಿ ಅನಧಿಕೃತ ಕಟ್ಟಡಗಳ ನಿರ್ಮಾಣ ಕುರಿತ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕೆಂದು ತಿಳಿಸಲಾಗಿದೆ.
ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೆ ನಿರ್ಭಂಧಿಸುವಂತೆ ಹಾಗೂ ಸಾರ್ವಜನಿಕ/ಸರ್ಕಾರದ ಜಾಗದಲ್ಲಿ ಮತ್ತು ಕೆರೆ,ಕುಂಟೆ,ಕಾಲುವೆಗಳ ಮೇಲೆ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡಗಳನ್ನ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹಾಗೂ ಮಾರ್ಗಸೂಚಿಗಳ ಅನ್ವಯದಂತೆ ನೆಲಸಮಗೊಳಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಗ್ರಾಮ ಪಂಚಾಯ್ತಿ,ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾಪಂಚಾಯ್ತಿ ಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಪಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ…