ಒಂದು ತಿಂಗಳಲ್ಲಿ ನರಹಂತಕ ವ್ಯಾಘ್ರನಿಗೆ ಎರಡು ಬಲಿ…ಮೂರು ಬಾರಿ ದಾಳಿ…ಬೆಚ್ಚಿಬಿದ್ದ ಸರಗೂರು,ಗುಂಡ್ಲುಪೇಟೆ, ನಂಜನಗೂಡು ಜನತೆ…ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಕೊನೆ ಯಾವಾಗ…ಕುಗ್ಗಿದ ಗ್ರಾಮಸ್ಥರ ಆತ್ಮಸ್ಥೈರ್ಯ ತುಂಬುವರು ಯಾರು…?
- TV10 Kannada Exclusive
- November 2, 2025
- No Comment
- 10


ಒಂದು ತಿಂಗಳಲ್ಲಿ ನರಹಂತಕ ವ್ಯಾಘ್ರನಿಗೆ ಎರಡು ಬಲಿ…ಮೂರು ಬಾರಿ ದಾಳಿ…ಬೆಚ್ಚಿಬಿದ್ದ ಸರಗೂರು,ಗುಂಡ್ಲುಪೇಟೆ, ನಂಜನಗೂಡು ಜನತೆ…ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಕೊನೆ ಯಾವಾಗ…ಕುಗ್ಗಿದ ಗ್ರಾಮಸ್ಥರ ಆತ್ಮಸ್ಥೈರ್ಯ ತುಂಬುವರು ಯಾರು…?

ಮೈಸೂರು,ನ2,Tv10 ಕನ್ನಡ
ಕಾಡು ಪ್ರಾಣಿ ಮಾನವ ಸಂಘರ್ಷ ಇಂದು ನೆನ್ನೆಯದಲ್ಲ.ಶತಮಾನಗಳಿಂದ ಉದ್ಭವಿಸಿರುವ ಸಮಸ್ಯೆ.ಸರ್ಕಾರಗಳು ಉರುಳಿ ಹೋದವು.ಜನಪ್ರತಿನಿಧಿಗಳು ಬದಲಾದರು.ಅಧಿಕಾರಿಗಳು ಬಂದು ಹೋದರು.ಭಾಷಣಗಳು ಸುರಿಮಳೆ ಆಯ್ತು.ಆದ್ರೆ ಕಾಡಂಚಿನ ಗ್ರಾಮಸ್ಥರ ಸಮಸ್ಯೆಗೆ ಪರಿಹಾರವೇ ಸಿಗಲಿಲ್ಲ.ಮಾನವ ಪ್ರಾಣಿ ಸಂಘರ್ಷಕ್ಕೆ ಕೊನೆ ಇಲ್ಲದಂತೆ ಸಾಗುತ್ತಲೇ ಇದೆ.ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಕಾಡು ಪ್ರಾಣಿಗಳ ದೃಷ್ಟಿ ಇದೀಗ ಮಾನವನ ಮೇಲೆ ಬಿದ್ದಿದೆ.ಗಾಯಗೊಳಿಸುತ್ತಿದ್ದ ಕ್ರೂರಮೃಗಗಳೀಗ ಬಲಿ ಪಡೆಯವ ಸ್ಥಿತಿ ತಲುಪಿವೆ.ಕಾಡು ಪ್ರಾಣಿಗಳಿಂದ ನಿರಂತರವಾಗಿ ದಾಳಿಗೆ ಒಳಗಾಗುತ್ತಿರುವ ಕಾಡಂಚಿನ ಮಾನವನ ಸಮಸ್ಯೆಗೆ ಪರಿಹಾರ ಏನು ಎಂಬುದಕ್ಕೆ ಉತ್ತರವೇ ಸಿಗುತ್ತಿಲ್ಲ.ಇತ್ತೀಚೆಗೆ ಒಂದೇ ತಿಂಗಳಲ್ಲಿ ಸರಗೂರು ತಾಲೂಕಿನಲ್ಲಿ ನರಹಂತಕ ವ್ಯಾಘ್ರನಿಂದ ಮೂರು ದಾಳಿಗಳು ನಡೆದಿವೆ.ಇಬ್ಬರು ಪ್ರಾಣ ತ್ಯಜಿಸಿದ್ದಾರೆ. ಓರ್ವರು ಪ್ರಮುಖ ಅಂಗಗಳನ್ನ ಕಳೆದುಕೊಂಡಿದ್ದಾರೆ.ನರಹಂತಕ ವ್ಯಾಘ್ರನ ನಿರಂತರ ದಾಳಿ ಸ್ಥಳೀಯರ ಸಹನೆಯ ಕಟ್ಟೆ ಒಡೆದಿದೆ.ಸರ್ಕಾರ,ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಷ ವ್ಯಕ್ತಪಡಿಸಿ ನೋವಿನಿಂದ ಮೌನಕ್ಕೆ ಜಾರುತ್ತಿದ್ದಾರೆ.ಕುರುಡು ಸರ್ಕಾರಕ್ಕೆ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆ ಕೇವಲ ಅರ್ಜಿಯಾಗಿ ಕಾಣುತ್ತಿದೆ.ಸರಗೂರಿನ ಕೂಡಗಿ ಗ್ರಾಮದ ದೊಡ್ಡಲಿಂಗಯ್ಯ,ಮುಳ್ಳೂರು ಗ್ರಾಮದ ರಾಜಶೇಖರಪ್ಪ ಹುಲಿದಾಳಿಗೆ ಪ್ರಾಣ ಕಳೆದುಕೊಂಡರೆ ಬಡಗಲಪುರ ಗ್ರಾಮದ ಮಹಾದೇವಗೌಡನ ಪರಿಸ್ಥಿತಿ ಹೇಳತೀರದಾಗಿದೆ.ಸಧ್ಯ ಸರಗೂರು,ಗುಂಡ್ಲುಪೇಟೆ,ನಂಜನಗೂಡು ಜನತೆ ಭೀತಿಗೆ ಸಿಲುಕಿದ್ದಾರೆ.ಅದರಲ್ಲೂ ಸರಗೂರು ತಾಲೂಕಿನ ಬಡಗಲಪುರ,ಮುಳ್ಳೂರು,ಕೂಡಗಿ ಗ್ರಾಮದ ಜನತೆ ಮನೆಯಿಂದ ಹೊರಬರಬೇಕಿದ್ದರೆ ಎಂಟೆದೆ ಧೈರ್ಯ ಇರಬೇಕಿದೆ.ಜಮೀನಿನತ್ತ ಹೋಗುವಂತಿಲ್ಲ.ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ.ಒಂಟಿಯಾಗಿ ಓಡಾಡುವಂತಿಲ್ಲ.ಇದು ಇಲ್ಲಿನ ಜನರ ದುಃಸ್ಥಿತಿ.ಇದಕ್ಕೆ ಬ್ರೇಕ್ ಇಲ್ಲವೇ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.ಸಾಕಷ್ಟು ತಜ್ಞರು ತಮ್ಮದೇ ಆದ ಸಲಹೆ ಅಭಿಪ್ರಾಯಗಳನ್ನ ನೀಡಿದ್ದಾರೆ.ಆದ್ರೆ ಇದ್ಯಾವುದೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ 874 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ದಟ್ಟವಾದ ಅಭಯಾರಣ್ಯ.ಭಾರತದಲ್ಲಿ ದಟ್ಟವಾದ ಕಾಡುಗಳ ಪಟ್ಟಿಯಲ್ಲಿ ಇದು ಮುಂಚೂಣಿಯಲ್ಲಿದೆ.ಜೊತೆಗೆ ಅತೀ ಬೆಲೆ ಬಾಳುವ ಸಂಪದ್ಭರಿತ ಅರಣ್ಯ ಪ್ರದೇಶ ಇದಾಗಿದೆ.1974 ರಲ್ಲಿ ಪ್ರಾಜೆಕ್ಟ್ ಟೈಗರ್ ಯೋಜನೆ ಅಸ್ತಿತ್ವಕ್ಕೆ ಬಂತು.ಅಲ್ಲಿಂದ ಹುಲಿಗಳ ರಕ್ಷಣೆ ಈ ಯೋಜನೆಯ ಪ್ರಮುಖ ಅಜೆಂಡಾ ಆಯಿತು.ಯೋಜನೆ ಅಸ್ತಿತ್ವದಲ್ಲಿದ್ದರೂ ಹುಲಿಗಳ ಸಂತತಿ ಕಡಿಮೆ ಆಗುವ ಆತಂಕ ಎದುರಾದಾಗ ಕೆಲವು ನಿಯಮಗಳನ್ನ ಜಾರಿಗೆ ತಂದು ಸಂಖ್ಯೆ ಹೆಚ್ಚಿಸುವ ಗುರಿಗೆ ಅರಣ್ಯ ಇಲಾಖೆ ಮುಂದಾಯ್ತು.ಕಳೆದ ಹತ್ತು ವರ್ಷಗಳಲ್ಲಿ ಈ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿತು.ವಿಪರ್ಯಾಸವೆಂದರೆ ಹುಲಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ವ್ಯಾಪ್ತಿ ಇರಲಿಲ್ಲ.ಇದರ ಜೊತೆಗೆ ಜನಪ್ರತಿನಿಧಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯೂ ಸೇರಿದಂತೆ ಅರಣ್ಯ ವ್ಯಾಪ್ತಿ ಕ್ಷೀಣಿಸುತ್ತಾ ಬಂತು.ಪ್ರಾಣಿಗಳು ತಮ್ಮದೇ ಆದ ಟೆರಿಟೆರಿ ಸೃಷ್ಟಿಸಿಕೊಳ್ಳುತ್ತವೆ.ಹುಲಿಗಳ ಸಂಖ್ಯೆ ಹೆಚ್ಚಾದಾಗ ಈ ವಿಚಾರದಲ್ಲಿ ಹುಲಿಗಳ ನಡುವೆಯೂ ಕಾಳಗಗಳು ನಡೆಯುತ್ತವೆ.ಗಾಯಗೊಂಡ ಹುಲಿಗಳು ಆ ವ್ಯಾಪ್ತಿಯನ್ನ ತೊರೆದು ಹೊಸ ಸಾಮ್ರಾಜ್ಯ ಸೃಷ್ಠಿಸಿಕೊಳ್ಳಲು ಮುಂದಾಗುತ್ತದೆ.ಆದರೆ ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವುದರಿಂದ ಕೆಲವು ಹುಲಿಗಳು ನಾಡಿನತ್ತ ಎಂಟ್ರಿ ಕೊಡುತ್ತವೆ.ಇದರ ಜೊತೆಗೆ ಕಾಡು ಪ್ರಾಣಿಗಳಿಗೆ ಅವಶ್ಯಕತೆ ಇರುವ ಆಹಾರದ ಕೊರತೆ ಎದುರಾದಾಗಲೂ ಹುಲಿಗಳು ನಾಡಿನತ್ತ ಸಾಗಿ ಜಾನುವಾರುಗಳನ್ನ ಹೊತ್ತೊಯ್ಯುತ್ತವೆ.ಅರಣ್ಯ ಇಲಾಖೆಗೆ ದೊಡ್ಡ ತಲೆನೋವು ಒತ್ತುವರಿ.ಖಾಸಗಿ ರೆಸಾರ್ಟ್ ಗಳು ಜೊತೆಗೆ ಪ್ರಭಾವಿಗಳು ಕಬಳಿಸಿರುವ ಸಾವಿರಾರು ಎಕ್ರೆ ಅರಣ್ಯ ಪ್ರದೇಶಗಳು ತಮ್ಮ ವ್ಯಾಪ್ತಿಯಿಂದ ಬಿಟ್ಟುಹೋಗುತ್ತಿರುವ ಹಿನ್ನಲೆ ಅಧಿಕಾರಿಗಳು ಅಸಹಾಯಕರಾಗುತ್ತಿದ್ದಾರೆ.ಒತ್ತುವರಿಯನ್ನ ತೆರವುಗೊಳಿಸದಿದ್ದಲ್ಲಿ ಸಮಸ್ಯೆ ಸಮಸ್ಯೆಯಾಗೇ ಉಳಿಯುತ್ತದೆ.ಅಂಜನಾಪುರ,ನಾಗಣಪುರ,ಬಳ್ಳೂರು ಹುಂಡಿ,ಜಯಲಕ್ಷ್ಮಿಪುರ,ಹಾದನೂರು ಒಡೆಯನಪುರ ಸೇರಿದಂತೆ ಅನೇಕ ಗ್ರಾಮಗಳು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸೇರಿದೆ.ಈ ಗ್ರಾಮಗಳ ಜನತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಸಹ ಕಾಡು ಪ್ರಾಣಿಗಳ ದಾಳಿಗೆ ಕಾರಣವಾಗುತ್ತದೆ.
ಸಧ್ಯ ನರಹಂತಕನ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.ಈಗಾಗಲೇ ಎರಡು ಮರಿಗಳನ್ನ ಸಂರಕ್ಷಿಸಿರುವುದಲ್ಲದೆ ಮೂರು ಹುಲಿಗಳನ್ನ ಸೆರೆಹಿಡಿದಿದ್ದಾರೆ.ಹೀಗಿದ್ದರೂ ಅಲ್ಲಲ್ಲಿ ಹುಲಿ ಹೆಜ್ಜೆಗಳು ಕಾಣಿಸಿಕೊಂಡು ಗ್ರಾಮಸ್ಥರಿಗೆ ಭೀತಿ ಸೃಷ್ಟಿಸುತ್ತಿದೆ.ಇದೀಗ ಸೆರೆಯಾಗಿರುವುದು ನರಹಂತಕ ಹುಲಿ ಅಲ್ಲ ಎನ್ನುವುದು ಮತ್ತಷ್ಟು ಆತಂಕ ಹುಟ್ಟಿಸಿದೆ.ಈಗಾಗಲೇ ಆನೆಗಳ ದಾಳಿಯಿಂದ ಕಂಗೆಟ್ಟ ಗ್ರಾಮಸ್ಥರಿಗೆ ನರಹಂತಕ ಹುಲಿ ಭೀತಿ ನುಂಗಲಾರದ ತುತ್ತಾಗಿದೆ.ಮನೆಯಿಂದ ಹೊರಬರುವುದೇ ಕಷ್ಟವಾದರೆ ಜೀವನ ನಡೆಸುವುದು ಹೇಗೆ ಎಂಬುದು ಅವರ ಪ್ರಶ್ನೆ.ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಲು ಈಗಾಗಲೇ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ.ಟ್ರೆಂಚ್ ನಿರ್ಮಾಣ,ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.ಹೀಗಿದ್ದೂ ಕಾಡು ಪ್ರಾಣಿಗಳಿಂದ ಹಾವಳಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.
ಸಧ್ಯ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿಗಳು ನಡೆದಾಗ ಪರಿಹಾರ ನೀಡುವ ಭರವಸೆ ನೀಡುತ್ತಾರೆ ಹೊರತು ನಿಯಂತ್ರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಕಾಡಂಚಿನ ಗ್ರಾಮದ ಜನತೆಗೆ ಜಾಗೃತಿ ಮೂಡಿಸುವ ಕಾರ್ಯಗಳು ಸಾಗುತ್ತಿಲ್ಲ.ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಸಾಕಷ್ಟು ಪರಿಣಾಮ ಬೀರಿದೆ.ಈಗಾಗಲೇ ಹುಲಿದಾಳಿಗಳಿಂದ ಬೆದರಿ ಕಂಗಾಲಾಗಿರುವ ಮೂರು ತಾಲೂಕಿನ ಜನತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ.ಪ್ರಾಣಿ ಮಾನವ ಸಂಘರ್ಷಕ್ಕೆ ಶೀಘ್ರದಲ್ಲಿ ಅಂಕಿತ ಹಾಕದಿದ್ದಲ್ಲಿ ಅಲ್ಲಿನ ಜನರ ವಕ್ರದೃಷ್ಠಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳಿಲು ಎದುರಿಸಬೇಕಾಗುತ್ತದೆ.ಕೂಡಲೇ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸದಿದ್ದರೆ ಭಾರಿ ಬೆಲೆ ತೆತ್ತಬೇಕಾಗುತ್ತದೆ…