ಮೈಸೂರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ 79.29 ಕೋಟಿ ಪಂಗನಾಮ…ಅಧಿಕಾರಿಗಳೇ ಶಾಮೀಲು…CID ತನಿಖೆಗೆ ಆದೇಶ…ಎಸಿ,ತಹಸೀಲ್ದಾರ್ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…
- CrimeMysore
- December 28, 2022
- No Comment
- 308
ಮೈಸೂರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ 79.29 ಕೋಟಿ ಪಂಗನಾಮ…ಅಧಿಕಾರಿಗಳೇ ಶಾಮೀಲು…CID ತನಿಖೆಗೆ ಆದೇಶ…ಎಸಿ,ತಹಸೀಲ್ದಾರ್ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…
ಮೈಸೂರು,ಡಿ28,Tv10 ಕನ್ನಡ
- ದಶಕದ ಹಿಂದೆ ನಡೆದ ಭಾರಿ ಹಗರಣಕ್ಕೆ ಟ್ವಿಸ್ಟ್ ನೀಡಿದ ಸರ್ಕಾರ
*ಮೈಸೂರು ಜಿಲ್ಲೆ ರೆವಿನ್ಯೂ ಇಲಾಖೆಯ ಇತಿಹಾಸದಲ್ಲೇ ಮೊದಲ ಪ್ರಕರಣ
*ಕರ್ನಾಟಕ ಸರ್ಕಾರದ ಮಹತ್ವದ ಆದೇಶ
*ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲು
*RTI ಕಾರ್ಯಕರ್ತ ಸಲ್ಲಿಸಿದ್ದ ದೂರಿಗೆ ಸರ್ಕಾರದ ದಿಟ್ಟ ಕ್ರಮ
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 422 ಮತ್ರು 424 ರ ಜಮೀನುಗಳಿಗೆ ಸಂಭಂಧಿಸಿದಂತೆ ನಡೆದ ಭಾರಿ ಗೋಲ್ ಮಾಲ್ ಗೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ.ಸರ್ಕಾರದ ಬೊಕ್ಕಸಕ್ಕೆ 79.29 ಕೋಟಿ ನಷ್ಟ ಮಾಡಿದ ಭಾರಿ ಹಗರಣಕ್ಕೆ ಸರ್ಕಾರ ಸ್ಪಂದಿಸಿ ಸಿಐಡಿ ತನಿಖೆಗೆ ಆದೇಶಿಸಿದೆ. ಎಸಿ,ತಹಸೀಲ್ದಾರ್,ಶಿರಸ್ತೇದಾರ್,ವಿಲೇಜ್ ಅಕೌಂಟೆಂಟ್ ಸೇರಿದಂತೆ 16 ಮಂದಿ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಸಲ್ಲಿಸಿದ್ದ ದೂರಿಗೆ ಸ್ಪಂದಿಸಿದ ಸರ್ಕಾರ ದಾಖಲೆಗಳನ್ನ ಪರಿಶೀಲಿಸಿ ಹಗರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಪ್ರಕರಣ ಏನು..?
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 424 ರವರೆಗಿನ 891 ಎಕ್ರೆ ಒಂದು ಗುಂಟೆ ಜಮೀನು ಮೈಸೂರಿನ ತ್ರಿಪುರ ಭೈರವಿ ಮಠದ ಸ್ವಾಮೀಜಿ ಶ್ರೀ ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ಹೆಸರಿನಲ್ಲಿತ್ತು.1989 ರಲ್ಲಿ ಶ್ರೀ ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ವಿಧಿವಶರಾದರು.ನಂತರ ಶ್ರೀ ಮಹಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ರವರು ಪಠ್ಠಾಭಿಷೇಕ ಮಾಡಿಕೊಂಡು ಪೀಠಾಧಿಪತಿಯಾದರು.ಈ ವೇಳೆ ಕಾಲವಾದ ಶ್ರೀ ಮಹಂತ ಕೃಷ್ಣಾನಂದ ಗಿರಿಗೋಸ್ವಾಮಿ ರವರ ಸಹೋದರ ಭೀಷ್ಮಪಿತಾಮಹ ಹಾಗೂ ಹಾಲಿ ಸ್ವೀಮೀಜಿಗಳಾದ ಶ್ರೀ ಮಹಂತ ಕೃಷ್ಣಮಹಾನಂದ ಗಿರಿಗೋಸ್ವಾಮಿ ರವರ ನಡುವೆ ಆಸ್ತಿವಿವಾದ ಶುರುವಾಯ್ತು.ಇದೇ ಜಮೀನುಗಳಿಗೆ ಸಂಭಂಧಿಸಿದಂತೆ ಭೂ ನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇತ್ತು.ಇತ್ಯರ್ಥವಾಗದ ಪ್ರಕರಣವನ್ನ ಏಕಾಏಕಿ ಕೈಗೆತ್ತಿಕೊಂಡ ಆಗಿನ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿದ್ದ ಹೆಚ್.ಕೆ.ಕೃಷ್ಣಮೂರ್ತಿ 14-9-2011 ರಂದು 891 ಎಕ್ರೆ ಜಮೀನು ಪೈಕಿ ಮೃತರಾದ
ಶ್ರೀ ಕೃಷ್ಣಾನಂದ ಗಿರಿಗೋಸ್ವಾಮಿಗೆ 10 ಯೂನಿಟ್(54 ಎಕ್ರೆ),ಶ್ರೀ ಕೃಷ್ಣಾನಂದಗಿರಿ ಗೋಸ್ವಾಮಿಯ ಸಹೋದರಿ ಸತ್ಯಭಾಮ ರವರಿಗೆ 10 ಯೂನಿಟ್(54 ಎಕ್ರೆ),ಭೀಷ್ಮಪಿತಾಮಹ ಹಾಗೂ ಇವರ ಮಗ ಕುಲದೀಪ್ ಪ್ರಕಾಶ್ ಎಂಬುವರಿಗೆ 20 ಯೂನಿಟ್(108 ಎಕ್ರೆ) ನೀಡುವಂತೆ ಆದೇಶಿಸಿದರು.ಈ ಆದೇಶದಂತೆ ಭೀಷ್ಮಪಿತಾಮಹ ಹಾಗೂ ಕುಲದೀಪ್ ಪ್ರಕಾಶ್ ರವರು ಖಾತೆ ಮಾಡಿಸಿಕೊಂಡು ಪರಿಹಾರ ಪಡೆದಿದ್ದಾರೆ.ಅಲ್ಲದೆ ಈಗಾಗಲೇ ಮೃತಪಟ್ಟಿರುವ ಸತ್ಯಭಾಮ ಭಾಗಕ್ಕೆ ಬಂದ 54 ಎಕ್ರೆ ಜಮೀನಿಗೆ ಹರ್ಷಕುಮಾರ್ ಎಂಬ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ.ಈ ವೇಳೆ ಸತ್ಯಭಾಮ ರವರ ಡೆತ್ ಸರ್ಟಿಫಿಕೇಟ್ ಆಗಲಿ,ವಂಶವೃಕ್ಷವಾಗಲಿ ಅಥವಾ ಕಂದಾಯ ಇಲಾಖೆಗೆ ಸಂಭಂಧಿಸಿದ ದಾಖಲೆಗಳನ್ನ ಪಡೆಯದೆ ಅಕ್ರಮವಾಗಿ ಖಾತೆ ಮಾಡಿದ್ದಾರೆ.ಮುಂದುವರಿದಂತೆ ಮೃತರಾದ ಕೃಷ್ಣಾನಂದ ಗಿರಿಗೋಸ್ವಾಮಿ ರವರ ಭಾಗಕ್ಕೆ ಬಂದ 54 ಎಕ್ರೆ ಜಮೀನನ್ನ ಯಾವುದೇ ದಾಖಲೆಗಳನ್ನ ಪಡೆಯದೆ ಸೋನು.ಬಿನ್.ಸುಧೀರ್ ಹಾಗೂ ಪ್ರದೀಪ್.ಬಿನ್.ಸುಧೀರ್ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ.
ಇಷ್ಟೆಲ್ಲಾ ಅಕ್ರಮಗಳ ನಂತರ ಉಳಿದ ಜಮೀನುಗಳ ಮೇಲೂ ಅಧಿಕಾರಿಗಳಿಗೆ ಕೆಂಗಣ್ಣು ಬಿದ್ದಿದೆ.ಟ್ರಿಬ್ಯುನಲ್ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿ ರವರು ಮತ್ತೊಮ್ಮೆ ಶೋಭಾದೇವಿ ಎಂಬುವರಿಗೆ 10 ಯೂನಿಟ್(54 ಎಕ್ರೆ),ಹೇಮಲತಾ ಎಂಬುವರಿಗೆ 10 ಯೂನಿಟ್(54 ಎಕ್ರೆ),ನಿಶಾ ಶರ್ಮ ಎಂಬುವರಿಗೆ 10 ಯೂನಿಟ್(54 ಎಕ್ರೆ),ಅಂಜನಾಶರ್ಮ ಎಂಬುವರಿಗೆ 10 ಯೂನಿಟ್(54 ಎಕ್ರೆ) ಹಾಗೂ ವಿಜಯಲಕ್ಷ್ಮಿ ಎಂಬುವರಿಗೆ 10 ಯೂನಿಟ್(54 ಎಕ್ರೆ) ಗಳು ನೀಡಿದ್ದಾರೆ.ಸದರಿ ಜಮೀನುಗಳಿಗೆ ಖಾತೆ ಸಹ ಆಗಿದೆ.
ಮತ್ತೊಂದು ವಿಶೇಷ ಎಂದರೆ ಇಲ್ಲಿ ಭೂನ್ಯಾಯ ಮಂಡಳಿ ಅಧ್ಯಕ್ಷರೂ ಹಾಗೂ ಕೆ.ಐ.ಎ.ಡಿ.ಬಿ.ಭೂಸ್ವಾಧೀನ ಅಧಿಕಾರಿಯೂ ಕೃಷ್ಣಮೂರ್ತಿ ರವರೇ ಆಗಿದ್ದಾರೆ.ಎರಡು ಹುದ್ದೆಯನ್ನ ಒಬ್ಬರೇ ಅಲಂಕರಿಸಿದ್ದ ಇವರು ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಖಾತೆ ಮಾಡಿದ್ದಾರೆ.ಸದರಿ ಜಮೀನುಗಳನ್ನ ಕೆ.ಐ.ಎ.ಡಿ.ಬಿ ರವರು ಭೂಸ್ವಾಧೀನಪಡಿಸಿಕೊಂಡು 79.29 ಕೋಟಿ ಅಕ್ರಮವಾಗಿ ಪರಿಹಾರ ನೀಡಲಾಗಿದೆ.
ಪರಿಹಾರ ನೀಡಿರುವ ವಿವರ ಇಂತಿದೆ
ಸೋನು.ಬಿನ್.ಸುದೀರ್ ಗೆ 6 ಕೋಟಿ 10 ಲಕ್ಷ 50 ಸಾವಿರ
ಪ್ರದೀಪ್.ಬಿನ್.ಸುಧೀರ್ ಗೆ 5 ಕೋಟಿ 15 ಲಕ್ಷ
ಸತ್ಯಭಾಮ ಬಾಬ್ತು ಹರ್ಷಕುಮಾರ್ ಗೆ 11ಕೋಟಿ 36 ಲಕ್ಷ
ಶೋಭಾದೇವಿ 11 ಕೋಟಿ 36 ಲಕ್ಷ,
ಹೇಮಲತಾ ಗೆ 11 ಕೋಟಿ 36 ಲಕ್ಷ
ನಿತಾಶರ್ಮಾ ಗೆ 11 ಕೋಟಿ 36 ಲಕ್ಷ
ಅಂಜನಾಶರ್ಮ ಗೆ 11 ಕೋಟಿ 36 ಲಕ್ಷ
ವಿಜಯಲಕ್ಷ್ಮಿ ರವರಿಗೆ 11ಕೋಟಿ 36 ಲಕ್ಷ ಕೆ.ಐ.ಎ.ಡಿ.ಬಿ.ಯಿಂದ ಪರಿಹಾರ ನೀಡಲಾಗಿದೆ.
ಮತ್ತೊಂದು ವಿಶೇಷವೆಂದರೆ ಈ ಎಲ್ಲಾ ಚೆಕ್ ಗಳು ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಗದಾಗಿದೆ.
ಅಂದಿನ ನಂಜನಗೂಡು ತಹಸೀಲ್ದಾರ್ ಆಗಿದ್ದ ನವೀನ್ ಜೋಸೆಫ್,ಶಿರಸ್ತೇದಾರ್ ಆಗಿದ್ದ ಟಿ.ರಮೇಶ್ ಬಾಬು,RI ಶಿವರಾಜು,VA ವೆಂಕಟೇಶ್ ರವರು ಶ್ರೀ ಕೃಷ್ಣಾನಂದಗಿರಿ ಗೋಸ್ವಾಮಿ ಹಾಗೂ ಸತ್ಯಭಾಮ ರವರು ಮರಣ ಹೊಂದಿದ್ದರೂ ನೇರವಾರಸುದಾರರಿಗೆ ಕಾನೂನಿನಂತೆ ನಾಡಕಚೇರಿಯಿಂದ ವಂಶವೃಕ್ಷ,ಮರಣಪ್ರಮಾಣ ಪತ್ರ ಪಡೆಯದೆ ಭೂ ನ್ಯಾಯ ಮಂಡಳಿ ಆದೇಶ ಎಂದು ನಮೂದಿಸಿ ಅಕ್ರಮವಾಗಿ ಪೌತಿ ಖಾತೆ ಮಾಡಿದ್ದಾರೆ.ಇದರಿಂದಾಗಿ ಸರ್ಕಾರಕ್ಕೆ 79 ಕೋಟಿ 29 ಲಕ್ಷ ನಷ್ಟ ಉಂಟಾಗಿದೆ.ಇಷ್ಟೆಲ್ಲಾ ಬೊಕ್ಕಸಕ್ಕೆ ನಷ್ಟವಾಗಿದ್ದರೂ 2011 ರಿಂದಲೂ ಅಧಿಕಾರಿಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಈ ಅಕ್ರಮಕ್ಕೆ ಸಂಭಂಧಿಸಿದಂತೆ ತ್ರಿಪುರ ಭೈರವಿ ಮಠದ ಸ್ವಾಮೀಜಿ ಶ್ರೀ ಮಹಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ಹಾಗೂ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಕರ್ನಾಟಕ ಸರ್ಕಾರ ಪ್ರಧಾನ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರು.ಅಲ್ಲಿಂದ ತನಿಖೆ ಆರಂಭವಾಗಿ ಕೇಂದ್ರ ಸರ್ಕಾರದ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರು ಎಸ್.ಕಮಲವಲ್ಲಿ(ಡೆಪ್ಯೂಟಿ ಅಕೌಂಟ್ಸ್ ಜನರಲ್) ರವರು ದಾಖಲೆಗಳನ್ನ ಪರಿಶೀಲಿಸಿ 28-5-2015 ರಂದು 79 ಕೋಟಿ 29 ಲಕ್ಷ ನಷ್ಟದ ಬಗ್ಗೆ ವರದಿ ನೀಡಿದ್ದಾರೆ.
ನಂತರ 2014-15 ಸಾಲಿನ ಕಂಡಿಕೆ 3.13 ರಂತೆ ಅರ್ಹರಲ್ಲದ ವ್ಯಕ್ತಿಗಳಿಗೆ ಭೂಪರಿಹಾರ ಪಾವತಿ ಮಾಡಿರುವುದರಿಂದ ಸದರಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮಿ ರವರು ಅಕ್ರಮ ಎಸಗಿರುವ ಅಧಿಕಾರಿಗಳು,ಸಿಬ್ಬಂದಿವರ್ಗ ಹಾಗೂ ವ್ಯಕ್ತಿಗಳ ವಿರುದ್ದ ಸಂಭಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ CID ತನಿಖೆಗೆ ವರ್ಗಾಯಿಸುವಂತೆ ಆದೇಶಿಸಿದ್ದಾರೆ.
ಸದರಿ ಆದೇಶದಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ರವರಿಗೆ ನಿರ್ದೇಶನ ನೀಡಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದ ಅನ್ವಯದಂತೆ 26-12-2022 ರಂದು ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಅಂದಿನ ಭೂ ನ್ಯಾಯಮಂಡಳಿ ಆದ್ಯಕ್ಷರಾದ ಕೃಷ್ಣಮೂರ್ತಿ ,ಅಂದಿನ ತಹಸೀಲ್ದಾರ್ ಆಗಿದ್ದ ನವೀನ್ ಜೋಸೆಫ್ ,ಶಿರಸ್ತೇದಾರ್ ಆಗಿದ್ದ ಟಿ.ರಮೇಶ್ ಬಾಬು,ಅಂದಿನ RI ಶಿವರಾಜ್,ಅಂದಿನ VA ವೆಂಕಟೇಶ್ ಸೇರಿದಂತೆ 16 ಮಂದಿ ವಿರುದ್ದ FIR ದಾಖಲಿಸಲಾಗಿದೆ.ಮೈಸೂರು ಜಿಲ್ಲೆ ರೆವಿನ್ಯೂ ಇಲಾಖೆ ಇತಿಹಾಸದಲ್ಲಿ ಮೊದಲ ಪ್ರಕರಣ ಇದಾಗಿದೆ.ಅಕ್ರಮ ಎಸಗಿದ ಅಧಿಕಾರಿಗಳಿಗೆ ಸರ್ಕಾರ ಚಾಟಿ ಬೀಸಿದೆ.ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯಂತೆ ಅಕ್ರಮವೆಸಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ನಷ್ಟ ಮಾಡಿದ ಅಧಿಕಾರಿಗಳಿಗೆ ಬಿಸಿ ತಟ್ಟಿಸಬೇಕಿದೆ.ನಷ್ಟ ಉಂಟು ಮಾಡಿದ ಅಧಿಕಾರಿಗಳಿಂದ ಹಣ ವಸೂಲಿ ಮಾಡುವಂತಹ ಕ್ರಮ ಜರುಗಿಸಬೇಕಿದೆ…