ಬೆಟ್ಟಳ್ಳಿ ಮಾರಮ್ಮನಿಗೆ ಧನುರ್ಮಾಸದ ವಿಶೇಷ ಪೂಜೆ .
- TemplesTV10 Kannada Exclusive
- December 16, 2025
- No Comment
- 18
ಬೆಟ್ಟಳ್ಳಿ ಮಾರಮ್ಮನಿಗೆ ಧನುರ್ಮಾಸದ ವಿಶೇಷ ಪೂಜೆ .
ಹನೂರು: ಮಂಗಳವಾರದಿಂದ ಧನುರ್ಮಾಸ ಪೂಜೆ ಪ್ರಾರಂಭವಾಗಿರುವ ಹಿನ್ನೆಲೆ ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ದೇವರ ಮೂರ್ತಿಗೆ ಫಲ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಗವಾರ ಬೆಳಗಿನ ಜಾವ 5 ಗಂಟೆಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ದೇವಿ ಮೂರ್ತಿಗೆ ಬಗೆ ಬಗೆಯ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಯಿತು. ಪಂಚಾಮೃತ ಅಭಿಷೇಕ ಅರ್ಪಿಸಿ ಧೂಪದಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾಮಂಗಳಾರತಿ ನೆರವೇರಿಸಿ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಪಟ್ಟಣ ಸೇರಿದಂತೆ ಭೈರನತ್ತ ಉದ್ದನೂರು, ಚಿಕ್ಕಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿ ಮೆರೆದರು.
ಅಲ್ಲದೆ ಆಗಮಿಸಿದ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ವರದಿ :ವಿಜಯ್ ಕುಮಾರ್.ಕಾಂಚಳ್ಳಿ /ಹನೂರು