- March 16, 2023
ವ್ಯಕ್ತಿತ್ವ ರೂಪಿಸುವುದಕ್ಕೆ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ : ಡಾ.ಸಿ.ಎನ್ ಅಶ್ವಥ್ ನಾರಾಯಣ್


ವ್ಯಕ್ತಿತ್ವ ರೂಪಿಸುವುದಕ್ಕೆ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ : ಡಾ.ಸಿ.ಎನ್ ಅಶ್ವಥ್ ನಾರಾಯಣ್

ಯುವಕರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ, ಕೌಶಾಲ್ಯಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಸಚಿವರಾದ ಡಾ.ಸಿ ಎನ್ ಅಶ್ವಥ್ ನಾರಾಯಣ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ಹಾಗೂ 2022-23ನೇ ಸಾಲಿನ ರಾಜ್ಯ ಮಟ್ಟದ ಖೋ-ಖೋ ಸ್ಪರ್ಧೆಯ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕ್ರೀಡೆ ಅಂದರೆ ವೃತ್ತಿಪರ ಕ್ರೀಡೆಯಾಗಬೇಕಿಲ್ಲ. ನಾವು ದಿನನಿತ್ಯ ಆಡುವ ಆಟಗಳು ಕೂಡ ಕ್ರೀಡೆಗಳೇ ಹಾಗಾಗಿ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಂಡು ದೈಹಿಕವಾಗಿ ಆರೋಗ್ಯವಾಗಿರಿ ಎಂದರು.
ಸಮಾಜದಲ್ಲಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಕ್ರೀಡೆ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದಕ್ಕೆ ಬೇಕಿರುವ ಮೂಲಭೂತ ವ್ಯವಸ್ಥೆ ಕ್ರೀಡಾಂಗಣ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಿರ್ಮಾಣಬೇಕು ಎಂದರು.
ಕ್ರೀಡೆ ಒಂದು ದೊಡ್ಡ ಶಕ್ತಿ ಇದ್ದಾಗೆ. ನಾಯಕತ್ವ ಗುಣ ಬೆಳಿಸಿಕೊಳ್ಳಬೇಕು ಎಂದರೆ ಕ್ರೀಡೆ ಅತ್ಯವಶ್ಯಕ ಎಂದರು.
ಕರ್ನಾಟಕದ 7 ಇಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅದರಲ್ಲಿ ಕೆ.ಆರ್ ಪೇಟೆಯ ಇಂಜಿಯರಿಂಗ್ ಕಾಲೇಜು ಕೂಡ ಒಂದು ಎಂದು ತಿಳಿಸಿದರು.
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ.ಕೆ.ಸಿ ನಾರಾಯಣಗೌಡ ಅವರು ಮಾತನಾಡಿ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಕರ್ನಾಟಕಕ್ಕೆ ಮಾದರಿಯಾಗಲಿ ಎಂದರು.
ಕೆ.ಆರ್ ಪೇಟೆಗೆ 18 ನೂರು ಕೋಟಿ ಅನುದಾನ ತಂದು, ಅಭಿವೃದ್ಧಿ ಪಡಿಸಲು ಶ್ರಮಿಸಿದ್ದೇನೆ.ಇದಕ್ಕೆ ನಿದರ್ಶನ ಎಂಬಂತೆ ಸಂತೆಬಾಚಹಳ್ಳಿ ಹೋಬಳಿ ಹಾಗೂ ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆಗಳು ತುಂಬಿರುವುದು ಎಂದರು.
ಜಗದ್ಗುರು ನಿರ್ಮಾಲನಾಥನಂದ ಸ್ವಾಮೀಜಿಯವರ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಇಷ್ಟೆಲ್ಲಾ ಕೆಲಸ ಕಾರ್ಯ ಮಾಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪುರುಷೋತ್ತಮನಂದ ಸ್ವಾಮೀಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ, ಕೆ.ಆರ್ ಪೇಟೆ ಪುರಸಭಾ ಅಧ್ಯಕ್ಷೆ ಮಹದೇವಿ ನಂಜುಂಡ, ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು