*ನಿಫಾ ವೈರಸ್ ಕುರಿತು ಆತಂಕ ಬೇಡ ಮುನ್ನೆಚ್ಚರಿಕೆ ಕ್ರಮ ವಹಿಸಿ…ಜಿಲ್ಲಾಧಿಕಾರಿ
ಡಾ. ಕೆ ವಿ ರಾಜೇಂದ್ರ ಸೂಚನೆ…
- TV10 Kannada Exclusive
- September 14, 2023
- No Comment
- 303
ಮೈಸೂರು,ಸೆ14,Tv10 ಕನ್ನಡ
ಕೇರಳ ಭಾಗದಲ್ಲಿ ನಿಫಾ ವೈರಸ್ ಕುರಿತು ಜನರು ಆತಂಕ ಬೇಡ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಿಫಾ ವೈರಸ್ ನಿಯಂತ್ರಣ ಕುರಿತು ಹಾಗೂ ಬರ ಘೋಷಣೆ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಗಳೊಂದಿಗೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇರಳ ಗಡಿ ಬಾಗದ ನಂಜನಗೂಡು ಹಾಗೂ ಹೆಚ್ ಡಿ ಕೋಟೆ ಬಾಗದ ಬಾವಲಿ ಬಳಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಕೇರಳ ದಿಂದ ಬರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಅವರಿಗೆ ಜ್ವರ ತಲೆನೋವು, ಮೈಕೈ ನೋವು ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು. ಜನರು ಯಾವದೇ ಭಯ ಪಡುವ ಅಗತ್ಯವಿಲ್ಲ. ಮನೆ ಬಳಿ ಬಾವಲಿಗಳು ಇದ್ದರೆ ಎಚ್ಚರಿಕೆ ವಹಿಸಿ, ಪಕ್ಷಿಗಳು ಕಚ್ಚಿರುವ ಹಣ್ಣಗಳನ್ನು ಬಳಸಬಾರದು. ಹಣ್ಣುಗಳನ್ನು ತೊಳೆದು ಉಪಯೋಗಿಸಿ. ನಿಫಾ ವೈರಸ್ ರೋಗ ಲಕ್ಷಣಗಳನ್ನು ಕುರಿತು ಜನರಿಗೆ ಅರಿವು ಮೂಡಿಸಿ. ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು ಬಗ್ಗೆ ಆರೋಗ್ಯ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳಿ ಎಂದು ಮಾಹಿತಿ ನೀಡಿದರು.ಖಾಸಗಿ ಕ್ಲಿನಿಕ್ ಗಳಲ್ಲಿ ವೈದ್ಯರ ಮಾಹಿತಿ, ಅವರ ವಿದ್ಯಾರ್ಹತೆ, ಅವರ ನೊಂದಣಿ ಸಂಖ್ಯೆಯ ಮಾಹಿತಿಯನ್ನು ಹಾಕಿರಬೇಕು. ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಆರೋಗ್ಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಬೇಕು. ತಾಯಿ ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಗರ್ಬಿಣಿ ಸ್ತ್ರೀಯರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ವೈದ್ಯಕೀಯ ಸೌಲಭ್ಯಗಳು ಸಿಗುವಂತೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ವಿತರಣೆ ಮಾಡುವಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಆರೋಗ್ಯ ಕೇಂದ್ರಗಳು, ಗ್ರಾಮ ಓನ್ ಸೆಂಟರ್, ಗ್ರಾಮ ಪಂಚಾಯತ್ ಗಳಲ್ಲಿ ಆರೋಗ್ಯ ಕಾರ್ಡ್ ಗಳನ್ನು ಮಾಡಿಸಿಕೊಳ್ಳಬಹುದು. ಜಿಲ್ಲೆಗೆ 26 ಲಕ್ಷ ಗುರಿ ಇದ್ದು ಇಲ್ಲಿಯವರೆಗೆ 6 ಲಕ್ಷ ನೋಂದಣಿ ಆಗಿದೆ. ಆದ್ದರಿಂದ ಸರಿಯಾಗಿ ನೊಂದಣಿ ಗೆ ಸಹರಿಸದ ಗ್ರಾಮ ಓನ್ ಸೆಂಟರ್ ಗಳಿಗೆ ನೋಟಿಸ್ ನೀಡಲಾಗುವುದು ಎಂದು ಸೂಚನೆ ನೀಡಿದರು.
ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೆ ಮೊದಲ ಆದ್ಯತೆ ನೀಡಿ ಮುಂದಿನ ಒಂದು ವಾರದೊಳಗೆ ಆರೋಗ್ಯ ಕಾರ್ಡ್ ಗಳನ್ನು ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲ್ಲೂಕ್ ನ್ನು ಹೊರತುಪಡಿಸಿ ಉಳಿದ ಎಲ್ಲಾ ತಾಲ್ಲೂಕುಗಳನ್ನು ಬರ ತಾಲ್ಲೂಕು ಗಳೆಂದು ಘೋಷಣೆ ಮಾಡಲಾಗಿದೆ. ತಹಶೀಲ್ದಾರರು ಹಾಗೂ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮ ತಾಲ್ಲೂಕಿನ ಗ್ರಾಮಗಳ ವ್ಯಾಪ್ತಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಗುರುತಿಸಬೇಕು. ಗ್ರಾಮಗಳ ಹತ್ತಿರದಲ್ಲಿ ಇರುವ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕು. ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಬೇಕು. ಜಾನುವಾರು ಮೇವು ಲಭ್ಯತೆ ಕುರಿತು ಮಾಹಿತಿ ಇರಬೇಕು. ಮೇವು ಬೆಳೆಯಲು ಮೇವು ಬಿತ್ತನೆ ಬೀಜಗಳ ವಿತರಣೆಯನ್ನು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದರು.
ರೈತರು ಗುಳೆ ಹೋಗದಂತೆ ನೋಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಕೆಲಸಗಳನ್ನು ನೀಡಿ ಅವರಿಗೆ ಆರ್ಥಿಕ ಸೌಲಭ್ಯ ದೊರೆಯುವಂತೆ ಮಾಡಬೇಕು. ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗಳನ್ನು ವರ್ಷದಲ್ಲಿ ಕನಿಷ್ಠ 2 ಬಾರಿ ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಕೆ ಎಂ ಗಾಯತ್ರಿ ಅವರು ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ 24 ಗಂಟೆಯೊಳಗೆ ಪರಿಹಾರ ಮಾಡಬೇಕು. ಬರ ಇರುವುದರಿಂದ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ಮಾಡಿಸಿ, ಹೆಚ್ಚಿನ ಮಾನವ ದಿನಗಳ ಸೃಜನೆ ಮಾಡಿ. ಹಾಸ್ಟೆಲ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ ಜ್ವರ, ಮೈಕೈ ನೋವು ಇದ್ದವರು ಆಸ್ಪತ್ರೆ ಗಳಿಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.