ಆಕ್ರೋಶದ ಕೈಗೆ ಬುದ್ಧಿಕೊಟ್ಟು ಅನರ್ಥಕ್ಕೆ ಅವಕಾಶ ಬೇಡ…ಮಣಿಪುರ ಜನತೆಗೆ ಪೇಜಾವರ ಶ್ರೀ ಮನವಿ…
- TV10 Kannada Exclusive
- July 21, 2023
- No Comment
- 69
ಮೈಸೂರು,ಜು21,Tv10 ಕನ್ನಡ
ದೇಶದ ಅವಿಭಾಜ್ಯಅಂಗವಾಗಿರುವ ಮಣಿಪುರ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ .
ಜಗತ್ತಿಗೇ ಅಹಿಂಸೆ ಶಾಂತಿಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಿದ ಭಾರತದ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು. ಅದು ನಮಗೆ ಬದುಕು ಕೊಟ್ಟ ನೆಲಕ್ಕೆ ನಾವು ಮಾಡುವ ಅವಮಾನವಾಗುತ್ತದೆ .
ಪ್ರಪಂಚದ ಸಮಗ್ರ ಇತಿಹಾಸವನ್ನು ಗಮನಿಸಿದರೆ ಹಿಂಸೆ ಆಕ್ರಮಣ ಅತ್ಯಾಚಾರಗಳಿಂದ ಯಾರೂ ಯಾವ ದೇಶವೂ ಏನನ್ನೂ ಸಾಧಿಸಿಲ್ಲ. ನಮ್ಮ ರಾಮಾಯಣ ಮಹಾಭಾರತಗಳೂ ಅದನ್ನು ಸಾರಿ ಹೇಳಿವೆ .
ಮಣಿಪುರದ ನೆಲದಲ್ಲಿ ಅನಾದಿಕಾಲದಿಂದ ಬದುಕುತ್ತಿರುವ ಎರಡು ಸಮುದಾಯಗಳ ನಡುವೆ ಯಾವುದೋ ಅಭಿಪ್ರಾಯ ಬೇಧಗಳಿಂದ ಹುಟ್ಟಿಕೊಂಡ ಈ ಗಲಭೆ ದಂಗೆಗಳಿಂದ ಏನನ್ನು ಸಾಧಿಸಲು ಹೊರಟಿದ್ದೇವೆ ? ನಮ್ಮ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಕೊಡಲು ಹೊರಟಿದ್ದೇವೆ ಎನ್ನುವುದನ್ನು ಯೋಚಿಸಿದ್ದೀರಾ?
ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳಿದಂತೆ ಆಕ್ರೋಶದ ಕೈಗೆ ಬುದ್ಧಿಯನ್ನು ಕೊಟ್ಟರೆ ಬುದ್ಧಿನಾಶವಾಗುತ್ತದೆ ಮತ್ತು ಬುದ್ಧಿನಾಶವು ನಮ್ಮೆಲ್ಲರ ನಾಶಕ್ಕೆ ಕಾರಣವಾಗುತ್ತದೆ ಎಂದು ಸಾರಿರುವುದನ್ನು ಗಮನಿಸಬೇಕು . ಆದ್ದರಿಂದ ಇಂಥ ವಿನಾಶಕಾರಿ ಬೆಳವಣಿಗೆಗಳು ಅವಶ್ಯವೇ ಎನ್ನುವುದನ್ನು ಗಲಭೆಯಲ್ಲಿ ತೊಡಗಿಕೊಂಡ ಸಮುದಾಯಗಳ ಮುಖಂಡರು ಅತ್ಯಂತ ತಾಳ್ಮೆ ಸಹನೆಯಿಂದ ವಿವೇಚಿಸಬೇಕು . ಒಬ್ಬನಿಗೆ ಅಥವಾ ಒಂದು ಸಮುದಾಯದ ಮೇಲೆ ಧಾಳಿ ಮಾಡಿ ಹಿಂಸಿಸಿ , ಸಾರ್ವಜನಿಕ ಸೊತ್ತುಳನ್ನು ನಾಶಮಾಡಿ ಏನನ್ನೋ ಸಾಧಿಸಿದ್ದೇವೆಂದು ಹೆಮ್ಮೆ ಪಡಬಹುದು . ಆದರೆ ಆ ಹೆಮ್ಮೆ ಶಾಶ್ವತವೇ ? ನೂರಕ್ಕೆ ನೂರು ಅಲ್ಲ. ಇದು ಮುಂದೆ ಮತ್ತಷ್ಟು ಅನರ್ಥಕಾರಿ ಬೆಳವಣಿಗೆಗಳಿಗೆ ದಾರಿಯಾದೀತು . ಅದೆಲ್ಲಕ್ಕಿಂತ ಹೆಚ್ಚಾಗಿ ಎರಡು ಸಮುದಾಯಗಳ ನಡುವಿನ ಜಗಳದ ಲಾಭವನ್ನು ಪಡೆಯಲು ಮತ್ಯಾರೋ ಹವಣಿಸಬಹುದು . ಆದ್ದರಿಂದ ಮಣಿಪುರದ ಜನತೆ ತಕ್ಷಣ ಹಿಂಸೆಯ ಮಾರ್ಗವನ್ನು ಬಿಟ್ಟು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಸಮಾಲೋಚಿಸಿ ಮಣಿಪುರದ ಮತ್ತು ಭಾರತದ ಭವ್ಯ ಭವಿಷ್ಯದ ದೃಷ್ಟಿಯಿಂದ ಕೂಡಲೇ ಪರಿಹರಿಸಿಕೊಂಡು ಇಡೀ ದೇಶಕ್ಕೇ ಒಂದು ಒಳ್ಳೆಯ ಸಂದೇಶವನ್ನು ಕೊಡಬೇಕು . ಮಣಿಪುರ ರಾಜ್ಯದ ಶಾಂತಿ ಸುಭಿಕ್ಷೆ ಪ್ರಗತಿಗೆ ಮಾರಕವಾಗಿರುವ ಇಂಥ ಅಹಿತಕರ ಬೆಳವಣಿಗೆಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಎಲ್ಲರೂ ಒಟ್ಟಾಗಿ ಶಪಥಮಾಡಬೇಕು . ನಮ್ಮ ಒಗ್ಗಟ್ಟು ನಮ್ಮ ಶಕ್ತಿ; ನಮ್ಮ ವಿಘಟನೆ ಮತ್ತೊಬ್ಬನ ಶಕ್ತಿ ಯಾಗುತ್ತದೆ ಎನ್ನುವುದನ್ನು ಅರಿತು ಒಗ್ಗಟ್ಟಿನಿಂದ ಮಣಿಪುರ ರಾಜ್ಯದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕುವಂತಾಗಲಿ ಎಂದು ಆಶಿಸುತ್ತೇವೆ . ಅವಶ್ಯವಿದ್ದರೆ ಮಣಿಪುರದ ಒಳಿತಿಗಾಗಿ ಯಾವುದೇ ಸಂಧಾನ ಮಾತುಕತೆಗಳಿಗೂ ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎನ್ನುವುದನ್ನೂ ತಿಳಿಸಲು ಬಯಸುತ್ತೇವೆ .
ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
ಶ್ರೀ ಪೇಜಾವರ ಮಠ ಉಡುಪಿ ಕರ್ನಾಟಕ..