ವರದಕ್ಷಿಣೆ ಕಿರುಕುಳ…ಗೃಹಿಣಿ ಸಾವು…ಪತಿ ಎಸ್ಕೇಪ್…
- Uncategorized
- July 14, 2023
- No Comment
- 73
ಹಾಸನ,ಜು14,Tv10 ಕನ್ನಡ
ವರದಕ್ಷಿಣೆ ಕಿರುಕುಳ ಹಿನ್ನಲೆ ಗೃಹಿಣಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಯಡಿಯೂರು ಗ್ರಾಮದಲ್ಲಿ ನಡೆದಿದೆ.ಪತಿ ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಗೃಹಿಣಿ ಪೊಷಕರು ಆರೋಪಿಸಿದ್ದಾರೆ. ಅನಿತಾ (27) ಮೃತ ದುರ್ದೈವಿ. ಆರು ವರ್ಷದ ಹಿಂದೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಮುರೇಹಳ್ಳಿ ಗ್ರಾಮದ ಅನಿತಾಳನ್ನು ಯಡಿಯೂರು ಗ್ರಾಮದ ಯೋಗೇಶ್‌ಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದ. ಇದಾದ ಬಳಿಕ ಮತ್ತಷ್ಟು ವರದಕ್ಷಿಣೆ ತರುವಂತೆ ಆಗಾಗ್ಗೆ ಪತ್ನಿ ಅನಿತಾಗೆ ಯೋಗೇಶ್ ಕಿರುಕುಳ ನೀಡುತ್ತಿದ್ದ. ಹತ್ತಾರು ಬಾರಿ ರಾಜಿ ಸಂಧಾನ ಮಾಡಲಾಗಿತ್ತು. ಅಷ್ಟೇ ಅಲ್ಲ, ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಯೋಗೇಶ್ ಬದಲಾಗದೆ ತನ್ನ ಕಿರುಕುಳ ಮುಂದುವರಿಸಿದ್ದ. ಮದುವೆಯಾದಾಗಿನಿಂದ ಅನಿತಾ ತವರು ಮನೆಯಲ್ಲೇ ಹೆಚ್ಚು ಅವಧಿ ಕಳೆದಿದ್ದರು. ರಾಜಿ ಪಂಚಾಯ್ತಿ ನಂತರವೂ ಒಂದು ತಿಂಗಳ ಹಿಂದೆ ಪತಿ ಜಗಳವಾಡಿ ಹಲ್ಲೆ ಮಾಡಿದ್ದರಿಂದ ಅನಿತಾ ತವರು ಮನೆ ಸೇರಿದ್ದಳು. ಮತ್ತೆ ರಾಜಿ ಸಂಧಾನ ಮಾಡಿ ಯೋಗೇಶ್ ಅನಿತಾಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ನಿನ್ನೆ ತನ್ನ ಹಳೇ ಚಾಳಿ ಬಿಡದೆ ಜಗಳ ತೆಗೆದು ಮನ ಬಂದಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ನೊಂದ ಅನಿತಾ ತನ್ನ ಪೋಷಕರಿಗೆ ಫೋನ್ ಮಾಡಿ ಮತ್ತೆ ಜಗಳ ತೆಗೆದು ನನ್ನ ಪತಿ ಹಲ್ಲೆ ಮಾಡುತ್ತಿದ್ದಾನೆ ಬನ್ನಿ ಎಂದು ಕರೆದಿದ್ದಾಳೆ. ಅದರಂತೆ ಪೋಷಕರು ಯಡಿಯೂರಿಗೆ ಬರುವಷ್ಟರಲ್ಲಿ ಅನಿತಾ ಕೊನೆಯುಸಿರೆಳೆದಿದ್ದಳು ಎನ್ನಲಾಗಿದೆ.ಗಾಯಗೊಂಡ ಪತ್ನಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ತಮ್ಮ ಮಗಳನ್ನು ಯೋಗೇಶನೇ ಕೊಲೆ ಮಾಡಿದ್ದು, ಆತನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ಮೃತಳ ಪೋಷಕರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ…